ಫಡ್ನವೀಸ್ ಆಳ್ವಿಕೆಯಲ್ಲಿ ರೈತರ ಆತ್ಮಹತ್ಯೆಗಳಲ್ಲಿ ಎರಡು ಪಟ್ಟು ಹೆಚ್ಚಳ: ಆರ್‌ಟಿಐಯಿಂದ ಬಹಿರಂಗ

Update: 2019-03-09 16:27 GMT

 ಮುಂಬೈ,ಮಾ.9: ಮಹಾರಾಷ್ಟ್ರದಲ್ಲಿ 2011-2014ರ ಅವಧಿಗೆ ಹೋಲಿಸಿದರೆ, 2015-18ರಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಎರಡು ಪಟ್ಟು ಏರಿಕೆಯಾಗಿದೆ ಎಂದು ಆರ್‌ಟಿಐ ಉತ್ತರವೊಂದು ಬಹಿರಂಗಪಡಿಸಿದೆ.

ಕಾಂಗ್ರೆಸ್-ಎನ್‌ಸಿಪಿ ಸರಕಾರದ ಆಳ್ವಿಕೆಯಿದ್ದ 2011-2014ರ ಅವಧಿಯಲ್ಲಿ 6268 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೆ, 2015-18ರಲ್ಲಿ ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಅದಕ್ಕಿಂತ ಎರಡು ಪಟ್ಟು ಹೆಚ್ಚು ಅಂದರೆ 11,995 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಜಿತೇಂದ್ರ ಗಾಡ್ಗೆ ಅವರಿಗೆ ಲಭ್ಯವಾದ ದತ್ತಾಂಶಗಳು ತಿಳಿಸಿವೆ.

ರೈತ ಆತ್ಮಹತ್ಯೆ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿರುವ ಪೂರ್ವ ಮಹಾರಾಷ್ಟ್ರದ ವಿದರ್ಭ ಪ್ರಾಂತದ ಆಮರಾವತಿ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

 ಕುತೂಹಲಕರವೆಂದರೆ, ಮುಖ್ಯಮಂತ್ರಿ ಫಡ್ನವೀಸ್ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಬ್ಬರೂ ವಿದರ್ಭ ಪ್ರಾಂತದವರಾಗಿದ್ದಾರೆ.

 ಮಹಾರಾಷ್ಟ್ರದಲ್ಲಿ ರೈತ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗಿರುವ ಹೊರತಾಗಿಯೂ, ಅನೇಕ ಸಂತ್ರಸ್ತ ರೈತ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರವನ್ನು ಕೂಡಾ ನೀಡಲಾಗಿಲ್ಲವೆಂದು ಆರ್‌ಟಿಐ ಉತ್ತರ ಬಹಿರಂಗಪಡಿಸಿದೆ.

2014ರಲ್ಲಿ 1358 ರೈತ ಕುಟುಂಬಗಳಿಗೆ ಪರಿಹಾರ ದೊರೆತರೆ, ಉಳಿದ 674 ಪ್ರಕರಣಗಳಲ್ಲಿ ಪರಿಹಾ ನಿರಾಕರಿಸಲಾಗಿದೆ. ಆದರೆ 2018ರಲ್ಲಿ ಒಟ್ಟು 1330 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ 1050ರಲ್ಲಿ ಪರಿಹಾರ ನಿರಾಕರಿಸಲಾಗಿದೆ ಎಂದು ಅರ್ಜಿಯು ತಿಳಿಸಿದೆ.

 ಅತ್ಯಧಿಕ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವ ಅಮರಾವತಿ ವಿಭಾಗದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳಲ್ಲಿ ಪರಿಹಾರವನ್ನು ನಿರಾಕರಿಸಲಾಗಿದೆ. 2016 ಹಾಗೂ 2018ರಲ್ಲಿ ಅನುಮೋದನೆಗಿಂತಲೂ, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ತಿರಸ್ಕೃತವಾಗಿವೆ ಎಂದು ಗಾಡ್ಗೆ ತಿಳಿಸಿದ್ದಾರೆ. ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ಧನವನ್ನು ಹೆಚ್ಚಿಸುವ ಪ್ರಸ್ತಾವ ಇನ್ನೂ ನೆನೆಗುದಿಯಲ್ಲಿದೆ. 2018ರಲ್ಲಿ ಮಹಾರಾಷ್ಟ್ರ ಸರಕಾರವು ‘‘ಗೋಪಿನಾಥ ಮುಂಢೆ ಅವಘಡ ವಿಮೆ ಯೋಜನೆ’ಯನ್ನು ಜಾರಿಗೆ ತಂದಿತ್ತು. ಆದರೆ ಸರಕಾರ ಹೊರಡಿಸಿದ ಸುತ್ತೋಲೆಯಲ್ಲಿ ಅಪಘಾತ ಮಾತ್ರ ಈ ವಿಮೆಯ ವ್ಯಾಪ್ತಿಗೆ ಒಳಪಡುತ್ತದೆಯೇ ಹೊರತು ಅದರಲ್ಲಿ ಆತ್ಮಹತ್ಯೆಯ ಉಲ್ಲೇಖವಿಲ್ಲ’’ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾಲ ಮನ್ನಾ ಅಥವಾ ಬೆಳೆ ವಿಮೆಯಂತಹ ಉತ್ತೇಜಕ ಕ್ರಮಗಳು, ನಿರೀಕ್ಷಿತ ಪರಿಣಾಮವನ್ನುಂಟು ಮಾಡುವಲ್ಲಿ ವಿಫಲವಾಗಿದೆಯೆಂದು ಗಾಡ್ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News