ಜಮ್ಮು: 4 ಸ್ಥಳಗಳಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್

Update: 2019-03-10 14:57 GMT

ಜಮ್ಮು, ಮಾ.10: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆಯ ನಾಲ್ಕು ಸ್ಥಳಗಳಲ್ಲಿ ಪಾಕ್ ಪಡೆಗಳು ಅಪ್ರಚೋದಿತವಾಗಿ ಕದನವಿರಾಮ ಉಲ್ಲಂಘಿಸಿ ಭಾರತದ ಮುಂಚೂಣಿ ನೆಲೆಗಳು ಹಾಗೂ ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣ ಘಾಟಿ ವಿಭಾಗದಲ್ಲಿ ತೀವ್ರ ಗುಂಡಿನ ದಾಳಿ ನಡೆದಿದ್ದು ಇಲ್ಲಿ ಪಾಕ್ ಪಡೆಗಳು ರವಿವಾರ ಬೆಳಿಗ್ಗಿನಿಂದಲೇ ಮೋರ್ಟರ್ ಶೆಲ್ ದಾಳಿ ಹಾಗೂ ಲಘು ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿವೆ . ಭಾರತೀಯ ಪಡೆಗಳು ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿವೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಅಲ್ಲದೆ ಮೇಂಧರ್ ವಿಭಾಗದ ಬಲೋನಿ ಮತ್ತು ಮನ್‌ಕೋಟೆ ಹಾಗೂ ಶಹಾಪುರ ವಿಭಾಗದಲ್ಲೂ ಪಾಕ್ ಪಡೆಗಳು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿವೆ. ಭಾರತದ ಕಡೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.26ರಂದು ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಪಡೆಗಳು 100ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News