ಕಚ್ಛಾ ತೈಲದ ಬೆಲೆ ನಿರಂತರ ಹೆಚ್ಚಳದಿಂದ ಆತಂಕ: ಭಾರತ

Update: 2019-03-10 16:33 GMT

ಹೊಸದಿಲ್ಲಿ, ಮಾ.10: ಕಚ್ಛಾ ತೈಲ ಬೆಲೆಯಲ್ಲಿ ನಿರಂತರ ಹೆಚ್ಚಳ ಹಾಗೂ ಇದರಿಂದ ದೇಶೀಯ ತೈಲ ಮಾರುಕಟ್ಟೆಯ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಭಾರತ ಕಳವಳಗೊಂಡಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್-ಫಾಲಿಹ್‌ರೊಂದಿಗೆ ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಮಾತುಕತೆ ಸಂದರ್ಭ ಧರ್ಮೇಂದ್ರ ಪ್ರಧಾನ್, ಕಚ್ಛಾತೈಲ ಬೆಲೆಯಲ್ಲಿ ಆಗುತ್ತಿರುವ ಹೆಚ್ಚಳದ ಬಗ್ಗೆ ಭಾರತದ ಆತಂಕವನ್ನು ತಿಳಿಸಿದರು. ಅಲ್ಲದೆ ‘ಒಪೆಕ್’( ಆರ್ಗನೈಸೇಷನ್ ಆಫ್ ಪೆಟ್ರೋಲಿಯಂ ಎಕ್ಸ್‌ಪೋರ್ಟಿಂಗ್ ಕಂಟ್ರೀಸ್) ರಾಷ್ಟ್ರಗಳು ಹಾಗೂ ಇತರ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ಭಾರತಕ್ಕೆ ತೈಲ ಪೂರೈಕೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಿಂದ ತಡೆರಹಿತ ಕಚ್ಛಾ ತೈಲ ಪೂರೈಕೆಯ ಅಗತ್ಯವನ್ನು ಒತ್ತಿಹೇಳಿದರು.

ಅಲ್ಲದೆ , ವಿಶ್ವದಲ್ಲಿ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಿಂದ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆಯೂ ಉಭಯ ಸಚಿವರು ಚರ್ಚೆ ನಡೆಸಿದರು. ಉಭಯ ದೇಶಗಳ ಜಂಟಿ ಸಹಭಾಗಿತ್ವದಲ್ಲಿ ಮಹಾರಾಷ್ಟ್ರದಲ್ಲಿ 44 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ‘ವೆಸ್ಟ್‌ಕೋಸ್ಟ್ ರಿಫೈನರೀಸ್ ಆ್ಯಂಡ್ ಪೆಟ್ರೋಕೆಮಿಕಲ್ಸ್’ ಯೋಜನೆ, ‘ಇಂಡಿಯನ್ ಸ್ಟ್ರಟೆಜಿಕ್ ಪೆಟ್ರೋಲಿಯಂ ರಿಸರ್ವ್(ಎಸ್‌ಪಿಆರ್)’ ಯೋಜನೆಯಲ್ಲಿ ಸೌದಿ ಅರೇಬಿಯಾದ ಸಹಭಾಗಿತ್ವದ ಬಗ್ಗೆಯೂ ಚರ್ಚೆ ನಡೆಯಿತು . ಜೊತೆಗೆ ಭಾರತದಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸೌದಿ ಅರೇಬಿಯಾದ ವಿವಿಧ ಹೂಡಿಕೆ ಪ್ರಸ್ತಾಪದ ಬಗ್ಗೆಯೂ ಸಚಿವರು ಪರಿಶೀಲನೆ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತಕ್ಕೆ ಅತೀ ಹೆಚ್ಚು ಕಚ್ಛಾ ತೈಲ ಹಾಗೂ ಎಲ್‌ಪಿಜಿ ಪೂರೈಸುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಎರಡನೆ ಸ್ಥಾನದಲ್ಲಿದೆ. 2017-18ರಲ್ಲಿ ಭಾರತದ ಕಚ್ಛಾತೈಲ ಆಮದಿನಲ್ಲಿ ಶೇ.16.7ರಷ್ಟು ಸೌದಿ ಅರೇಬಿಯಾದಿಂದ ಪೂರೈಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News