ಶೇ.33ರಷ್ಟು ಕ್ಷೇತ್ರ ಮಹಿಳೆಯರಿಗೆ ಮೀಸಲು: ಬಿಜೆಡಿ
ಭುವನೇಶ್ವರ, ಮಾ.10: ಬಿಜು ಜನತಾ ದಳ(ಬಿಜೆಡಿ)ದಿಂದ ಈ ಬಾರಿ ರಾಜ್ಯದ 21 ಸಂಸತ್ ಕ್ಷೇತ್ರಗಳಲ್ಲಿ ಶೇ.33ರಷ್ಟು ಸ್ಥಾನದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಕೇಂದ್ರಪಾರ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಒಡಿಶಾದಿಂದ ಶೇ.33ರಷ್ಟು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಲಿದ್ದಾರೆ . ಮಹಿಳೆಯರನ್ನು ಸಶಕ್ತಗೊಳಿಸುವುದು ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ರ ಕನಸಗಾಗಿತ್ತು. ಈ ನಿಟ್ಟಿನಲ್ಲಿ ಅವರು ಇಡೀ ದೇಕ್ಕೇ ಒಂದು ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದರು. ಮೂರು ಹಂತದ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ವ್ಯವಸ್ಥೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದವರು. ಅವರ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಶೇ.33 ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಇದೀಗ ಈ ಮೇಲ್ಪಂಕ್ತಿಯನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನುಸರಿಸಬೇಕಿದೆ. ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಬಾಯಿ ಮಾತು ಸಾಲದು ಅದನ್ನು ಈ ಎರಡೂ ಪಕ್ಷಗಳು ಕಾರ್ಯರೂಪಕ್ಕೆ ಇಳಿಸಬೇಕು ಎಂದು ಪಟ್ನಾಯಕ್ ಒತ್ತಾಯಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿತ್ತು.