ನಿರಂತರ ಉಪಟಳ ಸಹಿಸಲಾಗದು: ಉಗ್ರರಿಗೆ ಪ್ರಧಾನಿ ಎಚ್ಚರಿಕೆ

Update: 2019-03-10 15:16 GMT

ಹೊಸದಿಲ್ಲಿ, ಮಾ.10: ದೇಶದ ಶಾಂತಿಯನ್ನು ಹಾಳುಮಾಡಲು ಪ್ರಯತ್ನಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರರ ಸಂಘಟನೆಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಿರಂತರ ಉಪಟಳವನ್ನು ಸಹಿಸಿಕೊಳ್ಳಲಾಗದು ಎಂದು ಹೇಳಿದ್ದಾರೆ.

ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ನಿರಂತರ ಕಿರುಕುಳವನ್ನು ಸಹಿಸಲಾಗದು ಎಂದು ಮೋದಿ ಹೇಳಿದರು. ಗಾಝಿಯಾಬಾದ್‌ನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವು ಪ್ರತಿಕೂಲ ನೆರೆ ರಾಷ್ಟ್ರವನ್ನು ಎದುರಿಸುವ ಈ ಪರಿಸ್ಥಿತಿಯಲ್ಲಿ ಸಿಐಎಸ್‌ಎಫ್ ಗಮನಾರ್ಹ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ನೇರ ಯುದ್ಧ ನಡೆಸಲು ಅಸಮರ್ಥವಾಗಿರುವ ಪ್ರತಿಕೂಲ ನೆರೆರಾಷ್ಟ್ರ, ಗಡಿಯಾಚೆಗಿಂದ ಪ್ರೋತ್ಸಾಹ ಮತ್ತು ನೆರವು ಪಡೆದು ದೇಶದೊಳಗೆ ಒಳಸಂಚು ರೂಪಿಸುತ್ತಿರುವವರು ಹಾಗೂ ಭಯೋತ್ಪಾದಕ ಕೃತ್ಯ ನಡೆಯುವ ಸವಾಲಿನ ಸನ್ನಿವೇಶದಲ್ಲಿ ಸಿಐಎಸ್‌ಎಫ್ ದೇಶದ ಭದ್ರತೆಯನ್ನು ಖಾತರಿಪಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿರುವ ವಿಐಪಿ ಸಂಸ್ಕೃತಿ ಕೆಲವೊಮ್ಮೆ ಭದ್ರತೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ತಾನು ನಿಯಮ ಪಾಲಿಸುವ ವ್ಯಕ್ತಿಯಾಗಿದ್ದು ನಿಯಮ ಪಾಲನೆಗೆ ವ್ಯಕ್ತಿಯ ಸ್ಥಾನಮಾನ ಅಡ್ಡಿಯಾಗಬಾರದು ಎಂಬುದು ತನ್ನ ನಿಲುವಾಗಿದೆ . ನಿಯಮಪಾಲನೆ ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ನಾಗರಿಕರು ನಿಯಮ ಪಾಲಿಸದಿದ್ದರೆ ಆಗ ಪ್ರತಿಯೊಂದು ಕಾರ್ಯವೂ ಜಟಿಲವಾಗುತ್ತದೆ ಎಂದರು.

ಸ್ವಾತಂತ್ರ ದೊರೆತಂದಿನಿಂದ ದೇಶದ ಕರ್ತವ್ಯ ನಿರ್ವಹಣೆ ಸಂದರ್ಭ ಪ್ರಾಣತ್ಯಾಗ ಮಾಡಿದ 35 ಸಾವಿರ ಪೊಲೀಸರಲ್ಲಿ 4 ಸಾವಿರ ಪೊಲೀಸರು ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್ ಮುಂತಾದ ಅರೆಸೇನಾ ಪಡೆಗೆ ಸೇರಿದವರು ಎಂದು ಮೋದಿ ಸ್ಮರಿಸಿಕೊಂಡರು.

ಪರಮಾಣು ಸ್ಥಾವರಗಳು, ವಿಮಾನ ನಿಲ್ದಾಣಗಳು, ಬಂದರು, ವಿದ್ಯುತ್ ಸ್ಥಾವರಗಳು, ಸರಕಾರಿ ಕಟ್ಟಡಗಳು, ದಿಲ್ಲಿ ಮೆಟ್ರೋ ರೈಲು ನಿಗಮ ಸೇರಿದಂತೆ ದೇಶದ ಪ್ರಮುಖ ನೆಲೆಗಳ ಭದ್ರತಾ ಕಾರ್ಯವನ್ನು ಸಿಐಎಸ್‌ಎಫ್ ನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News