ಪುಲ್ವಾಮ ದಾಳಿಯ ಸೂತ್ರಧಾರನ ಹೆಸರು ಬಹಿರಂಗ

Update: 2019-03-10 16:17 GMT

ಹೊಸದಿಲ್ಲಿ,ಮಾ.10: ಕನಿಷ್ಠ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮ ಭಯೋತ್ಪಾದಕ ದಾಳಿಯ ಸೂತ್ರಧಾರಿ, ಜೈಷೆ ಮುಹಮ್ಮದ್ ಗುಂಪಿನ ಉಗ್ರಗಾಮಿ ಮುದಸ್ಸಿರ್ ಅಹ್ಮದ್ ಖಾನ್ ಯಾನೆ ಮುಹಮ್ಮದ್ ಭಾಯಿ ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ.

ಜಮ್ಮುಕಾಶ್ಮೀರದ ತ್ರಾಲ್ ‌ನಲ್ಲಿರುವ ಮುದಸ್ಸಿರ್ ಖಾನ್‌ನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಲಭ್ಯವಾದ ಸುಳಿವುಗಳನ್ನು ಆಧರಿಸಿ ತನಿಖಾಧಿಕಾರಿಗಳು ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ‘‘ 23 ವರ್ಷ ವಯಸ್ಸಿನ ಮುದಸ್ಸಿರ್ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದು, ಪದವಿ ಶಿಕ್ಷಣ ಪಡೆದಿದ್ದಾನೆ. ಪುಲ್ವಾಮದ ನಿವಾಸಿಯಾದ ಈತ, ಭಯೋತ್ಪಾದಕ ದಾಳಿಗೆ ಮಾರುತಿ ಈಕೊ ಕಾರು ಹಾಗೂ ಸ್ಫೋಟಕಗನ್ನು ವ್ಯವಸ್ಥೆಗೊಳಿಸಿದ್ದ. ಸ್ಫೋಟಕಗಳು ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನಗಳ ಸಾಲಿಗೆ ಢಿಕ್ಕಿ ಹೊಡೆಸಿದ ಆತ್ಮಹತ್ಯಾ ಬಾಂಬರ್ ಅದಿಲ್ ಅಹ್ಮದ್ ದಾರ್, ಮುದಸ್ಸಿರ್ ಜೊತೆ ನಿರಂತರ ಸಂಪರ್ಕದಲ್ಲಿದ್ದನೆಂದು ಅಧಿಕಾರಿಗಳು ಹೇಳಿದ್ದಾರೆ.

ತ್ರಾಲ್‌ನ ಮಿರ್ ಮೊಹಲ್ಲಾದ ನಿವಾಸಿಯಾದ ಮುದಸ್ಸಿರ್, 2017ರಲ್ಲಿ ಜೈಶೆ ಮುಹಮ್ಮದ್ ಉಗ್ರಗಾಮಿ ಗುಂಪಿಗೆ ಸೇರ್ಪಡೆಗೊಂಡಿದ್ದನೆನ್ನಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಜೆಇಎಂನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆನ್ನಲಾದ ನೂರ್ ಮುಹಮ್ಮದ್ ತಂತ್ರೆಯ್ ಯಾನೆ ‘ನೂರ್ ತ್ರಾಲಿ’ ಎಂಬಾತ ಮುದಸ್ಸಿರ್‌ನನ್ನು, ಉಗ್ರಗಾಮಿ ಗುಂಪಿನ ತೆಕ್ಕೆಗೆ ಸೆಳೆದಿದ್ದನೆನ್ನಲಾಗಿದೆ.

ನೂರ್ ಮುಹಮ್ಮದ್ ತಂತ್ರೆಯ ನಿಧನದ ಬಳಿಕ ಮುದಸ್ಸಿರ್ ತನ್ನ ಮನೆಯನ್ನು ತೊರೆದು, ಜೈಶೆ ಗುಂಪಿನ ಚಟುವಚಿಕೆಗಳಲ್ಲಿ ಸಕ್ರಿಯನಾಗಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಖಾನ್, ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಇಲೆಕ್ಟ್ರಿಶಿಯನ್ ಡಿಪ್ಲೊಮಾ ಮಾಡಿದ್ದ. ಕಾರ್ಮಿಕರೊಬ್ಬರ ಹಿರಿಯ ಪುತ್ರನಾದ ಈತ, ಕಳೆದ ವರ್ಷ ಸಂಜವಾನ್‌ನ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲೂ ಮುಖ್ಯವಾದ ಪಾತ್ರ ವಹಿಸಿದ್ದ. ಈ ದಾಳಿಯಲ್ಲಿ ಆರು ಮಂದಿ ಸೈನಿಕರು ಹಾಗೂ ಓರ್ವ ನಾಗರಿಕರ ಸಾವನ್ನಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News