ಬಾಹ್ಯಾಕಾಶದಲ್ಲಿ ‘ಮಹಿಳೆಯರ ದರ್ಬಾರ್’!: ಇತಿಹಾಸದಲ್ಲೇ ಮೊದಲು

Update: 2019-03-10 16:38 GMT

ವಾಶಿಂಗ್ಟನ್, ಮಾ. 10: ಇತಿಹಾಸದಲ್ಲೇ ಮೊದಲ ಬಾರಿಗೆ, ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸರ್ವ-ಮಹಿಳಾ ಸಿಬ್ಬಂದಿಯೇ ‘ಬಾಹ್ಯಾಕಾಶ ನಡಿಗೆ’ (ಸ್ಪೇಸ್‌ವಾಕ್) ನಿರ್ವಹಿಸಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಸಿಎನ್‌ಎನ್ ಸುದ್ದಿವಾಹಿನಿಗೆ ತಿಳಿಸಿದೆ.

‘ಎಕ್ಸ್‌ಪೆಡಿಶನ್ 59’ ಭಾಗವಾಗಿ, ನಾಸಾ ಗಗನಯಾತ್ರಿಗಳಾದ ಆ್ಯನ್ ಮೆಕ್‌ ಕ್ಲೇನ್ ಮತ್ತು ಕ್ರಿಸ್ಟೀನಾ ಕೋಚ್ ಮಾರ್ಚ್ 29ರಂದು ಬಾಹ್ಯಾಕಾಶ ನಡಿಗೆ ನಿರ್ವಹಿಸಲಿದ್ದಾರೆ. ಭೂಮಿಯಲ್ಲಿ ಅವರಿಗೆ ಕೆನಡ ಬಾಹ್ಯಾಕಾಶ ಸಂಸ್ಥೆಯ ಫ್ಲೈಟ್ ಕಂಟ್ರೋಲರ್ ಕ್ರಿಸ್ಟೀನ್ ಫಾಕ್ಸಿಯೋಲ್ ನೆರವು ನೀಡಲಿದ್ದಾರೆ.

ಹ್ಯೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ನಿಯಂತ್ರಣ ಘಟಕದಲ್ಲಿ ಕ್ರಿಸ್ಟೀನ್ ಫಾಕ್ಸಿಯೋಲ್ ಕಾರ್ಯಾಚರಣೆ ನಡೆಸಲಿದ್ದಾರೆ.

‘‘ಈಗ ನಿರ್ಧಾರವಾಗಿರುವಂತೆ, ಮಾರ್ಚ್ 29ರಂದು ನಡೆಯಲಿರುವ ಬಾಹ್ಯಾಕಾಶ ನಡಿಗೆಯು ಮಹಿಳೆಯರೇ ನಡೆಸುವ ಮೊದಲ ಇಂಥ ನಡಿಗೆಯಾಗಿದೆ’’ ಎಂದು ನಾಸಾ ವಕ್ತಾರೆ ಸ್ಟೀಫನೀ ಶಯರ್‌ಹೊಲ್ಝ್ ಸಿಎನ್‌ಎನ್‌ಗೆ ತಿಳಿಸಿದರು.

‘‘ಇದು ಉದ್ದೇಶಿತ ಮೂರು ಬಾಹ್ಯಾಕಾಶ ನಡಿಗೆಗಳ ಸರಣಿಯಲ್ಲಿ ಎರಡನೇಯದಾಗಿದೆ. ಮಾರ್ಚ್ 22ರಂದು ನಡೆಯಲಿರುವ ಬಾಹ್ಯಾಕಾಶ ನಡಿಗೆಯಲ್ಲಿ ಆ್ಯನ್ ಅವರು ನಿಕ್ ಹೇಗ್ ಜೊತೆ ಭಾಗವಹಿಸಲಿದ್ದಾರೆ. ಅದೇ ವೇಳೆ, ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸುವ ವ್ಯಕ್ತಿಗಳು ಮತ್ತು ವೇಳಾಪಟ್ಟಿ ಯಾವಾಗಲೂ ಬದಲಾಗಬಹುದಾಗಿದೆ’’ ಎಂಬುದಾಗಿಯೂ ಅವರು ಹೇಳಿದರು.

 ‘‘ಇಬ್ಬರು ಮಹಿಳಾ ಬಾಹ್ಯಾಕಾಶ ನಡಿಗೆಗಾರರು ಅಲ್ಲದೆ, ಪ್ರಧಾನ ಫ್ಲೈಟ್ ಡೈರೆಕ್ಟರ್ ಆಗಿ ಮೇರಿ ಲಾರೆನ್ಸ್ ಹಾಗೂ ಪ್ರಧಾನ ಇವಿಎ (ಬಾಹ್ಯಾಕಾಶ ನಡಿಗೆ) ಫ್ಲೈಟ್ ಕಂಟ್ರೋಲರ್ ಆಗಿ ಜಾಕೀ ಕ್ಯಾಗೀ ಭಾಗವಹಿಸುತ್ತಾರೆ. ಅವರು ಕೂಡ ಮಹಿಳೆಯರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News