ದೇಶ ಭಕ್ತಿ ಎಂಬ ವಂಚಕರ ಅಡಗುತಾಣ

Update: 2019-03-10 18:46 GMT

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಯೋಜನಾ ಆಯೋಗದ ಸಮಾಧಿಯ ಮೇಲೆ ನೀತಿ ಆಯೋಗ ಎಂಬ ದುರ್ನೀತಿ ಆಯೋಗ ರಚಿಸಲಾಯಿತು. ಆರ್‌ಬಿಐ, ಸಿಬಿಐಗಳನ್ನು ಇದ್ದೂ ಇಲ್ಲದಂತೆ ಮಾಡಲಾಯಿತು. ಚುನಾವಣಾ ಆಯೋಗದ ಮೇಲೂ ಪ್ರಭಾವ ಬೀರುತ್ತಿರುವ ಮಾತುಗಳು ಕೇಳಿಬರುತ್ತಿವೆ. ನ್ಯಾಯಾಂಗದಲ್ಲೂ ಹಸ್ತಕ್ಷೇಪದ ದೂರುಗಳಿವೆ.


'ಲಫಂಗರ ಕೊನೆಯ ಆಶ್ರಯ ತಾಣ ರಾಜಕೀಯ' ಎಂದು ಚರ್ಚಿಲ್ ಹೇಳಿದ್ದರೆಂದು ನೆನಪು. ಅದೇ ರೀತಿ ನಮ್ಮ ದೇಶದಲ್ಲಿ ಫಟಿಂಗರ, ವಂಚಕರ, ಕ್ರಿಮಿನಲ್‌ಗಳ ಅಡಗುತಾಣ ದೇಶ ಭಕ್ತಿ. ಇದು ಧಾರವಾಡದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ದಿಲ್ಲಿಯಿಂದ ಬಂದಿದ್ದ ಸಮಾಜವಾದಿ ಹೋರಾಟಗಾರ್ತಿ ಮಣಿಮಾಲಾ ವ್ಯಕ್ತಪಡಿಸಿದ ಅಭಿಪ್ರಾಯ. ಮಣಿಮಾಲಾ ಹೇಳಿರುವುದರಲ್ಲಿ ಅತಿಶಯೋಕ್ತಿಯಾದುದ್ದೇನೂ ಇಲ್ಲ. ದೇಶಭಕ್ತರೆಂದು ಹೇಳಿಕೊಂಡು ಓಡಾಡುವವರನ್ನು ಕಂಡರೆ ಈ ಮಾತು ನಿಜವೆನಿಸುತ್ತದೆ. ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಜೆ.ಪಿ. ನಾಯಕತ್ವದಲ್ಲಿ ಭ್ರಷ್ಟಾಚಾರ, ಸರ್ವಾಧಿಕಾರದ ವಿರುದ್ಧ ಚಳವಳಿ ನಡೆದಾಗ ಚಳವಳಿಗಾರರನ್ನು ಯಾರೂ ಈ ರೀತಿ ಕರೆದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಮೋದಿಯವರನ್ನು ವಿರೋಧಿಸುವವರೆಲ್ಲ ರಾಷ್ಟ್ರದ್ರೋಹಿಗಳೆಂದು ಬ್ರಾಂಡ್ ಮಾಡಲಾಗುತ್ತದೆ. ಭ್ರಷ್ಟಾಚಾರ, ಲಂಚಕೋರತನ, ಕೋಮುವಾದದ ಬಗೆಗೆ ಪ್ರಶ್ನಿಸಿದರೆ ದೇಶದ್ರೋಹದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ನೀವೇನು ಮಾಡಿದಿರಿ? ಜನರಿಗೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿದಿರಿ?ಎಷ್ಟು ಲಕ್ಷ ಉದ್ಯೋಗ ಸೃಷ್ಟಿಸಿದಿರಿ? ವಿದೇಶದಿಂದ ಎಷ್ಟು ಕಪ್ಪು ಹಣವನ್ನು ಸ್ವದೇಶಕ್ಕೆ ತಂದಿರಿ ಎಂದು ಪ್ರಶ್ನಿಸಿದರೆ, ಪ್ರಶ್ನಿಸಿದವರ ಹಣೆಗೆ ದೇಶದ್ರೋಹದ ಬೋರ್ಡು ಅಂಟಿಸಲಾಗುತ್ತದೆ.

ನಾವು ಸಂವಿಧಾನ ಬದಲಿಸಲು ಬಂದಿದ್ದೇವೆ. ಈ ಬಾರಿ ಗೆದ್ದರೆ, ಇನ್ನು 50 ವರ್ಷಗಳ ಕಾಲ ನಮ್ಮನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತುಗಳನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ನಾಯಕರಿಂದ ಮತ್ತು ಮಂತ್ರಿಗಳಿಂದ ಕೇಳುತ್ತಿದ್ದೇವೆ. ಇದರಿಂದ ಇವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುತ್ತದೆ. ಸಂವಿಧಾನವನ್ನು ನಾಶ ಮಾಡಿ ಜನತಂತ್ರದ ಮೇಲೆ ಸಮಾಧಿ ಕಟ್ಟಲು ಇವರು ಮಸಲತ್ತು ನಡೆಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಯೋಜನಾ ಆಯೋಗದ ಸಮಾಧಿಯ ಮೇಲೆ ನೀತಿ ಆಯೋಗ ಎಂಬ ದುರ್ನೀತಿ ಆಯೋಗ ರಚಿಸಲಾಯಿತು. ಆರ್‌ಬಿಐ, ಸಿಬಿಐಗಳನ್ನು ಇದ್ದೂ ಇಲ್ಲದಂತೆ ಮಾಡಲಾಯಿತು. ಚುನಾವಣಾ ಆಯೋಗದ ಮೇಲೂ ಪ್ರಭಾವ ಬೀರುತ್ತಿರುವ ಮಾತುಗಳು ಕೇಳಿಬರುತ್ತಿವೆ. ನ್ಯಾಯಾಂಗದಲ್ಲೂ ಹಸ್ತಕ್ಷೇಪದ ದೂರುಗಳಿವೆ.

ದಲಿತ ಸಮುದಾಯದ ಒಬ್ಬ ಚಿಂತಕ ಸಂವಿಧಾನ ರಚಿಸಿದರೆಂಬ ಕಾರಣಕ್ಕೆ ಪದೇ ಪದೇ ಅದನ್ನು ಬದಲಿಸುವ ಮಾತುಗಳನ್ನು ಕೇಳುತ್ತಿದ್ದೇವೆ. ಗೋಹತ್ಯೆ ಹೆಸರಿನಲ್ಲಿ ಮುಸಲ್ಮಾನರಿಗಿಂತ ದಲಿತರ ಮೇಲೆ ದಾಳಿ ಕೊಲೆಗಳು ಹೆಚ್ಚಾಗಿವೆ. ಈ ಕೊಲೆಗಳನ್ನು ಪ್ರತಿಭಟಿಸಿದವರನ್ನು ದೇಶದ್ರೋಹದ ಆರೋಪಕ್ಕೆ ಗುರಿಪಡಿಸಲಾಗುತ್ತಿದೆ. ಆದಿವಾಸಿಗಳ ಹಿತರಕ್ಷಣೆಗೆ ಹೋರಾಡುತ್ತ ಬಂದ ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಚಿಂತಕ, ಲೇಖಕ ಆನಂದ ತೇಲ್ತುಂಬ್ಡೆ, ಕವಿ ವರವರರಾವ್ ಅಂಥವರ ಮೇಲೆ ರಾಜದ್ರೋಹದ ಆರೋಪ ಹೊರಿಸಲಾಗಿದೆ. ತೇಲ್ತುಂಬ್ಡೆ ಅವರನ್ನು ಹೊರತುಪಡಿಸಿ ಉಳಿದವರನ್ನು ಜೈಲಿಗೆ ಅಟ್ಟಲಾಗಿದೆ. ತೇಲ್ತುಂಬ್ಡೆ ಅವರನ್ನು ಯಾವಾಗ ಬಂಧಿಸುತ್ತಾರೊ ಹೇಳಲಾಗುವುದಿಲ್ಲ. 150 ವರ್ಷಗಳ ಹಿಂದಿನ ಬ್ರಿಟಿಷ್ ಸರಕಾರ ಸ್ವಾತಂತ್ರ ಹೋರಾಟ ಹತ್ತಿಕ್ಕಲು ರಚಿಸಿದ ಕಾನೂನನ್ನು ಬಳಸಿಕೊಂಡು ಭಿನ್ನ ದನಿಗಳನ್ನು ಹತ್ತಿಕ್ಕಲಾಗುತ್ತಿದೆ.

ಕಾಶ್ಮೆರ ಸಮಸ್ಯೆಯ ಬಗೆಗೂ ಈ ಸರಕಾರದ ನೀತಿ ವಿನಾಶಕಾರಿಯಾಗಿದೆ. ಕಾಶ್ಮೆರ ನೆಲ ನಮ್ಮದು ಎಂದು ಹೇಳುವ ಕೇಂದ್ರ ಸರಕಾರ ಕಾಶ್ಮೆರಿಗಳು ನಮ್ಮವರು ಎಂದು ಹೇಳುವುದಿಲ್ಲ. ಕಾಶ್ಮೆರಿಗಳನ್ನು ಹತ್ತಿಕ್ಕಲು ದಮನ ನೀತಿಯನ್ನು ಅನುಸರಿಸಲಾಗುತ್ತಿದೆ. ದೇಶದ ಜಾತಿ ವ್ಯವಸ್ಥೆ, ಸುಲಿಗೆ, ಶೋಷಣೆ ಬಗ್ಗೆ ಮಾತಾಡಿದರೆ, ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ದೇಶವನ್ನು ಲೂಟಿ ಮಾಡಿದವರು, ಬ್ಯಾಂಕುಗಳನ್ನ ದೋಚಿದವರು, ಕೋಮು ಹತ್ಯಾಕಾಂಡ ಮಾಡಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಕೊಂದವರಿಂದ, ಗಾಂಧಿ ಹಂತಕರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಾದ ದುರ್ದೆಸೆ ಬಂದಿದೆ. ದೇಶ ಭಕ್ತಿಯ ಚಪ್ಪರದೊಳಗೆ ಈ ವಂಚಕರು ಆಸರೆ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ನಿರ್ಣಾಯಕವಾಗಿದೆ. ಸಂವಿಧಾನವನ್ನು ನಾಶ ಮಾಡಲು ಹೊರಟವರನ್ನು ಮತ್ತೆ ಚುನಾಯಿಸಬೇಕೇ? ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯುವುದೇ ಎಂಬ ಅಂಶಗಳ ಬಗ್ಗೆ ನಾವು ಎಚ್ಚರಿಕೆಯಿಂದ ಆಲೋಚನೆ ಮಾಡಬೇಕಾಗಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಈ ಸರಕಾರದ ನಡೆ ಸಂಶಯಾಸ್ಪದವಾಗಿದೆ. ಈ ವ್ಯವಹಾರ ಪಾರದರ್ಶಕವಾಗಿದ್ದರೆ ಸರಕಾರ ಇದರ ರಹಸ್ಯ ಕಾಪಾಡಿಕೊಳ್ಳಲು ಇಷ್ಟು ಪರದಾಡಬೇಕಿರಲಿಲ್ಲ. ಈ ಬಗ್ಗೆ ತನಿಖಾ ವರದಿಯನ್ನು ಪ್ರಕಟಿಸಿದ ಈ ದೇಶದ ಪ್ರತಿಷ್ಠಿತ ಪತ್ರಿಕೆ ಹಿಂದೂ ಬಗ್ಗೆ ಈ ಸರಕಾರ ನಡೆದುಕೊಂಡ ರೀತಿ ಅದಕ್ಕೆ ಶೋಭೆ ತರುವಂತಹದ್ದಲ್ಲ. ಅಧಿಕೃತ ರಹಸ್ಯ ಕಾಯ್ದೆಯನ್ನು ಬಳಸಿಕೊಂಡು ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕಲು ಈ ಸರಕಾರ ನಡೆಸಿದ ಯತ್ನ ಖಂಡನೀಯವಾಗಿದೆ. ರಫೇಲ್ ಕುರಿತು ತನಿಖಾ ವರದಿಗಳು ಪ್ರಕಟವಾಗತೊಡಗಿ ಒಂದು ತಿಂಗಳ ಮೇಲಾಯಿತು. ಈ ಅವಧಿಯಲ್ಲಿ ದಾಖಲೆಯ ಕಳವಿನ ಬಗ್ಗೆ ಎಲ್ಲೂ ಉಸಿರೆತ್ತದ ಸರಕಾರ ಈಗ ದಿಢೀರನೆ ಸುಪ್ರೀಂ ಕೋರ್ಟ್ ಎದುರು ರಫೇಲ್ ವ್ಯವಹಾರದ ಕುರಿತ ರಕ್ಷಣಾ ಸಚಿವಾಲಯದಲ್ಲಿದ್ದ ದಾಖಲೆಗಳು ಕಳವಾಗಿದೆ ಎಂದು ಹೇಳಿದ್ದು ಅದರ ನಡೆಯ ಬಗ್ಗೆ ಸಂಶಯ ಮೂಡಿಸಿದೆ. ಇದು ಟೀಕೆಗೆ ಗುರಿಯಾದಾಗ ದಾಖಲೆಯನ್ನು ಜೆರಾಕ್ಸ್ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲ ಯದಲ್ಲಿ ಅಟಾರ್ನಿ ಜನರಲ್ ನೀಡಿದ ಹೇಳಿಕೆ ಈ ಸರಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ಸಂದೇಹ ಮೂಡಿಸಿದೆ. ಈ ಹಗರಣವನ್ನು ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿಗಳೆಂದು ಕರೆಯುವುದು ವಂಚನೆಯ ಪರಮಾವಧಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News