×
Ad

ಮೋದಿಜೀ ಬ್ಯಾಟಿಂಗ್ ಗೆ ಇಳಿದರೆ ಅಮಿತ್ ಶಾ ಬೌಲರ್ ನ ಕೈ ಕತ್ತರಿಸುತ್ತಾರೆ ...

Update: 2019-03-11 19:36 IST

ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮತ್ತೆ ಹೊಸ ವಿಡಿಯೋ ಮೂಲಕ ಬಂದಿದ್ದಾರೆ. ಈ ಹಿಂದೆ 'ಸಿಯಾಚಿನ್ . .' ಖ್ಯಾತಿಯ ವಿಡಿಯೋ ಮೂಲಕ ದೇಶದಲ್ಲಿ ಮನೆಮಾತಾಗಿದ್ದ ಕುನಾಲ್ ಹಾಸ್ಯದ ಮೂಲಕ ಅಳುವವರನ್ನು ಕುಟುಕುವ ಪ್ರಚಂಡ. ಯಾವುದೇ ಹಿಂಜರಿಕೆ ಇಲ್ಲದೆ ಮೋದಿ, ಕೇಂದ್ರ ಸರಕಾರ , ಬಿಜೆಪಿಯ ಧೋರಣೆಗಳನ್ನು ಹಾಸ್ಯದ ಮೂಲಕ ಕುಟುಕಿ ಜನರಿಗೆ ಮನರಂಜನೆ ಜೊತೆ ರಾಜಕೀಯ ಕಲಿಸುತ್ತಿದ್ದಾರೆ.

ಈ ವಿಭಿನ್ನ ಹಾಸ್ಯದ ಬಗ್ಗೆ ಅವರಿಗೆ ಯಾವುದೇ ಮುಲಾಜಿಲ್ಲ. " ಹೌದು ನಾನು ಒಂದು ಕಡೆಗಿದ್ದೇನೆ.. ಏನಿವಾಗ.. ಎಲ್ಲ ಮಾಧ್ಯಮಗಳು ಒಂದು ಕಡೆಗೆ ಆಗಿವೆ.. ಹಾಗಾಗಿ ನಾನು ಇನ್ನೊಂದು ಕಡೆಗೆ ಇದ್ದೇನೆ " ಎಂದು ಹೇಳುತ್ತಾರೆ ಕುನಾಲ್ . 

ಸೋಮವಾರ ಬಿಡುಗಡೆಯಾದ ಅವರ ಹೊಸ ವಿಡಿಯೋದ ಆಯ್ದ ಹಾಸ್ಯ ಝಲಕ್ ಗಳು ಇಲ್ಲಿ ಕನ್ನಡದಲ್ಲಿವೆ

ನಮಗೆ ಕಾಮಿಡಿಯನ್ ಗಳಿಗೆ ರಾಜಕಾರಣಿಗಳು ಕೊಡುವ ದೊಡ್ಡ ಪುಕ್ಕಟೆ ಸಲಹೆ "ನೀವು ಕಾಮಿಡಿ ಮಾಡಿ. ಆದರೆ ಅದರಲ್ಲಿ ರಾಜಕೀಯ ಮಾಡಬೇಡಿ". ಮೊನ್ನೆ ವಿಮಾನ ನಿಲ್ದಾಣವೊಂದರಲ್ಲಿ ಹೋಗ್ತಾ ಇದ್ದೆ. ಹಿಂದಿನಿಂದ ಒಬ್ಬ ಭುಜಕ್ಕೆ ತಟ್ಟಿ ಕರೆದ. ತಿರುಗಿ ನೋಡಿದರೆ  ಹುಟ್ಟಾ ರಾಜಕಾರಣಿ...  ಹೊಟ್ಟೆಯಲ್ಲಿ ಜನರ ದುಡ್ಡು ತುಂಬಿರುವುದು ಮುಖದಲ್ಲಿ ಎದ್ದು ಕಾಣುತ್ತಿತ್ತು.  " ನೋಡಪ್ಪಾ , ನೀನು ಕಾಮಿಡಿ ಮಾಡು. ಎಷ್ಟು ಬೇಕಾದರೂ ಕಾಮಿಡಿ ಮಾಡು. ಆದರೆ ರಾಜಕೀಯ ನಮಗೆ ಬಿಟ್ಟು ಬಿಡು" ಅಂತ ಶುರು ಮಾಡಿದ. " ಆಯ್ತು ಸಾರ್ , ನಾವು ಅದನ್ನೇ ಮಾಡಿದ್ದು. ರಾಜಕೀಯ ನಿಮಗೇ ಬಿಟ್ಟಿದ್ದೆವು. ಆದರೆ ನೀವು ಕಾಮಿಡಿ ಮಾಡಲು ಶುರು ಮಾಡಿದ್ರಿ. ಹಾಗಾಗಿ ಮತ್ತೆ... " 

ನನಗಿರುವ ದೊಡ್ಡ ಪ್ರಶ್ನೆ ಏನೆಂದರೆ " ನನ್ನ ಮತ್ತು ಅಂಬಾನಿ ಮಧ್ಯೆ ಮೋದಿ ಏನು ಮಾಡುತ್ತಿದ್ದಾರೆ ? ನನಗೆ ಯಾಕೆ ನೇರವಾಗಿ ಅಂಬಾನಿಗೆ ಮತ ಹಾಕಲು ಆಗುತ್ತಿಲ್ಲ ? ಒಂದು ಕ್ಷಣ ಯೋಚಿಸಿ . ಅಂಬಾನಿ ಪ್ರಧಾನಿಯಾದರೆ ಹೇಗಾಗಬಹುದು ?  ದಕ್ಷಿಣ ಮುಂಬೈ ಯಲ್ಲಿ ಅವರು ಅಷ್ಟು ಎತ್ತರಕ್ಕೆ ನಿಲ್ಲಿಸಿರುವ ' ವಿಕಾಸ ' ವನ್ನು ನೋಡಿದ್ದೀರಾ ? ಇದನ್ನೆಲ್ಲಾ ನೋಡಿದರೆ ಚುನಾವಣೆ ಅಂಬಾನಿ ಮತ್ತು ಟಾಟಾ ನಡುವೆಯೇ ನಡೆಯಬೇಕು. ಎಲ್ಲ ಸರಿ ಹೋಗೋದು ಆವಾಗಲೇ. ಈ ಟಾಟಾ ಯಾವತ್ತಾದರೂ ಉತ್ತರ ಪ್ರದೇಶದಲ್ಲಿ ನಿಂತುಕೊಂಡು ಸೂಟು ಬೂಟು ಹಾಕಿಕೊಂಡು" " ಮಂದಿರ್ ವಹೀ ಬನಾಯೇಂಗೆ ... " ಎಂದು ಅರಚುವುದನ್ನು ಊಹಿಸಲು ಸಾಧ್ಯವೇ ? ಹಾಗೊಂದು ವೇಳೆ ಅರಚಿದರೂ " ಏಯ್ .. ಸುಮ್ನಿರಯ್ಯಾ.. ನೀನು ಫಾರ್ಸಿ .. " ಅಂತ ಜನ ದಬಾಯಿಸಬಹುದು. 

ಇನ್ನು ಈ ಅಂಬಾನಿ , ಟಾಟಾ ಮನೆಗೆ ಯಾವನಾದರೂ ಸೂಟ್ ಕೇಸ್ ಹಿಡ್ಕೊಂಡು ಹೋಗ್ತಾನ ... ಅಂಬಾನಿ ಮನೆಗೆ ನಾಲ್ಕು ಕೋಟಿ ತೆಗೊಂಡು ಹೋಗಿ ... ಸಾ .. ನನ್ ಟೆಂಡರ್ ನೋಡ್ಕೊಳಿ ಅಂದರೆ ಅಂಬಾನಿ ಏನ್ ಹೇಳ್ತಾನೆ ... ಲೋ .. ನನ್ಮಗನೇ .. 2040 ರಲ್ಲಿ ಭಾರತದಲ್ಲಿ ಬರುವ ಹೊಸ ನೋಟು ಯಾವುದು ಗೊತ್ತಾ ನಿಂಗೆ ... ಅದು ಈಗ ನನ್ ಜೇಬಲ್ಲಿದೆ... ಓ .. ಅಲ್ಲಿ ಸ್ವಿಮ್ಮಿಂಗ್ ಪೂಲಲ್ಲಿ ಈಜಾಡ್ತಾವ್ನಲ್ಲಾ .. ಅಜ್ಜ .. ಯಾರು ಗೊತ್ತಾ .. ಮೋದಿಜೀ ಅದು ... ನಡಿ ನಡಿ ...

ಇನ್ನು ಅಂಬಾನಿ ಪ್ರಧಾನಿಯಾದರೆ ನಮ್ಮ ಪ್ರಥಮ ಮಹಿಳೆ ನೀತಾ ಅಂಬಾನಿ ..ಊಹಿಸಿ ನೋಡಿ ಈಗಿರುವ ಅಮಿತ್ ಶಾ ಗಿಂತ ಎಷ್ಟು ಚೆನ್ನಾಗಿರುತ್ತೆ ಅದು. ಈಗಿರುವ ಪ್ರಥಮ ಮಹಿಳೆ ಜೈಲಿಗೆ ಹೋಗಿ ಬಂದಿದ್ದಾರೆ. 

ಮೋದಿಜೀಯನ್ನು ಟೀಕಿಸಿದರೆ ನನ್ನನ್ನು ಜನ ಧರ್ಮ ವಿರೋಧಿ ಅಂತಾರೆ ... ಹೇಗೆ ಸ್ವಾಮಿ ನಾನು ಧರ್ಮ ವಿರೋಧಿ ... ಮೋದಿಜೀ ಧರ್ಮವೇ ? ಆ ಲೆಕ್ಕದಲ್ಲಿ ನೋಡಿದರೆ ಅವರು ಅತ್ಯಂತ ಕ್ಷಿಪ್ರ ಬೆಳವಣಿಗೆ ಕಂಡ ವ್ಯಕ್ತಿ.. ಮೊದಲು ಸಿಎಂ, ಮತ್ತೆ ಪಿಎಂ ಈಗ ನೋಡಿದರೆ ಧರ್ಮ ! ಇಷ್ಟು ವೇಗವಾಗಿ ರಿಲಯನ್ಸ್ ಕೂಡ ಬೆಳೆದಿಲ್ಲ .. ನೋಡಿ .. ನಾನು ನಿಜವಾಗಿಯೂ ಧಾರ್ಮಿಕ ವ್ಯಕ್ತಿ .. ಬಾಲ್ಯದಲ್ಲಿ ಪ್ರತಿ ಆರತಿಗೆ ಹೋಗಿ ಗಂಟೆ ಬಾರಿಸುತ್ತಿದ್ದೆ .. ಅದರ ಫೋಟೋ ಬೇಕಾದರೂ ಇದೆ.. ಅದು ಮೋದಿಜೀಯ ಪದವಿಯ ಹಾಗೆ ಅಲ್ಲ. ನನ್ನದು ಒರಿಜಿನಲ್ ಫೋಟೋ ಇದೆ .. 

ನಾನು ನಿಜವಾಗಿಯೂ ದೇವಭಕ್ತನಾಗಿದ್ದೆ .. ಏಕೆಂದರೆ ನನ್ನ ತಾಯಿ ನಿನ್ನನ್ನು ಧರ್ಮ ರಕ್ಷಿಸುತ್ತದೆ ಎಂದು ಹೇಳುತ್ತಿದ್ದರು...ಬಹಳ ಒಳ್ಳೆಯ ವಿಷಯ..  ಆದರೆ ಈಗ ನೋಡಿದರೆ ನೀನು ಧರ್ಮವನ್ನು ರಕ್ಷಿಸಬೇಕು ಎಂದು ಹೇಳುತ್ತಿದ್ದಾರೆ .. ಅರೆ .. ಇದು ಬದಲಾಗಿದ್ದು ಯಾವಾಗ ಸ್ವಾಮಿ.. ನಾನು ನನ್ನ ಮೊಬೈಲ್ ಬಿಲ್ ಕಟ್ಟುವುದೇ ಕಷ್ಟ .. ಇನ್ನು ದೇವರನ್ನು ರಕ್ಷಿಸುವುದು ಹೇಗೆ ?  ನಮ್ಮ ದೇವರು ಭಾರತದಿಂದ ಶ್ರೀಲಂಕಾಕ್ಕೆ ಸೇತುವೆ ಕಟ್ಟಿದರು .. ಅದೂ ಎಲ್ ಆ್ಯಂಡ್ ಟಿ (ನಿರ್ಮಾಣ ಸಂಸ್ಥೆ) ಯ ಸಹಾಯ ಇಲ್ಲದೆಯೇ !  ಆದರೆ ಆ ದೇವರ ರಕ್ಷಣೆ ಮಾಡುವಲ್ಲಿ ಬ್ಯುಸಿ ಇರುವ ನಮ್ಮ ನಾಯಕರಿಗೆ ಎಲ್ ಆ್ಯಂಡ್ ಟಿ ಇದ್ದೂ ಸೇತುವೆಗಳನ್ನು ಕಟ್ಟಿಸಲಾಗುತ್ತಿಲ್ಲ...

ಪ್ರತಿ ದಸರಾಕ್ಕೆ ನಮ್ಮ ನಾಯಕರು ಖಡ್ಗ ಹಿಡಿದುಕೊಂಡು ಬರುತ್ತಾರೆ... ಆ ಖಡ್ಗ ನೋಡಿಯೇ ಮೂಡ್ ಹಾಳಾಗುತ್ತೆ ... ಅಲ್ಲ .. ಈಗಲಾದರೂ ಏನಾದರೂ ಮಾಡರ್ನ್ ಶಸ್ತ್ರಾಸ್ತ್ರ ತರಬಾರದಾ .. ಜನರಿಗೂ ಓಕೆ ನಮ್ಮ ನಾಯಕರು ಏನೋ ಅಭಿವೃದ್ಧಿ ಮಾಡುತ್ತಿದ್ದಾರೆ ಅಂತ ಸಮಾಧಾನ ಆಗುತ್ತೆ .. ರಾಕೆಟ್ ಲಾಂಚರ್ ತನ್ನಿ, ಮಷಿನ್ ಗನ್ ತನ್ನಿ ಅಥವಾ ರಫೆಲ್ ಜೆಟ್ಟೇ ತನ್ನಿ ... ಏನಾದರೂ ಹೊಸತು ತನ್ನಿ 

ಇನ್ನು ಈ ನಾಯಕರು ಪ್ರತಿವರ್ಷ ಅದೇ ಭಾಷಣ... ಹಿಂದೂಗಳೇ ನಿಮಗೆ ಆತ್ಮ ಸಮ್ಮಾನ ಸಿಗುತ್ತೆ ..  ನಿಮಗೆ ಹಿಂದೂ ರಾಷ್ಟ್ರ ಸಿಗುತ್ತೆ.. ಅರೆ.. ಹಿಂದೂ ರಾಷ್ಟ್ರವನ್ನು ನಿನ್ನಲ್ಲಿ ಕೇಳಿದ್ದು ಯಾರು.. ಸ್ವಾಮಿ ನಮಗೆ ರಸ್ತೆ ಕೊಡಿ ..ಈ ಹಿಂದೂ ರಾಷ್ಟ್ರ.. ಇಷ್ಟರವರೆಗೆ ರಾಜಕಾರಣಿಗಳು ಕೊಡುವುದನ್ನು ಮಾತ್ರ ನೋಡಿದ್ದೇವೆ.. ಆದರೆ ಯಾರೂ ಅದನ್ನು ಈವರೆಗೆ ಕೇಳಿದ್ದನ್ನು ನಾವು ನೋಡಿಲ್ಲ..  ಉದಾಹರಣೆಗೆ ಪಿಯುಸಿ ಪಾಸಾದ ಮಗನಿಗೆ ತಂದೆ ಬೈಕ್ ಕೊಡಿಸಲಾ ಎಂದು ಕೇಳಿದರೆ ಇಲ್ಲ ಅಪ್ಪ ಈ ಸರ್ತಿ ಹಿಂದೂ ರಾಷ್ಟ್ರವೇ ಬೇಕು ಎಂದು ಹೇಳಿದ್ದು ಎಲ್ಲಾದರೂ ಕೇಳಿದ್ದೀರಾ.. 

ಅಲ್ಲಿಂದ ನಮ್ಮ ನೇತಾಗಳು ನೇರವಾಗಿ ಇತಿಹಾಸಕ್ಕೆ ಹಾರುತ್ತಾರೆ ... ಇದೇ ಆ ಕೋಟೆ .. ಇಲ್ಲಿಂದಲೇ ಮಹಾರಾಜರು ಮೊಗಲರನ್ನು ಸೋಲಿಸಿ ಮಹಾರಾಜರು ಅಲ್ಲಿ ಭಾಗವಧ್ವಜ ಹಾರಿಸಿದರು ... ಅರೆ ನೇತಾಜಿ .. ಬಹಳ ಒಳ್ಳೆಯ ವಿಷಯ .. ಆದರೆ ಮಹಾರಾಜರಿಂದ ನೀವು ಸ್ವಲ್ಪ ಸ್ಫೂರ್ತಿ ಪಡೆದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು.. ಅವರು ಕಟ್ಟಿಸಿದ ಆ ಕೋಟೆ ಮುನ್ನೂರು ವರ್ಷ ಹಿಂದಿನದ್ದು .. ಈಗಲೂ ಹಾಗೇ ಇದೆ .. ಆದರೆ ನೀವು ಎರಡು ವರ್ಷ ಮೊದಲು ನಿರ್ಮಿಸಿದ ರಸ್ತೆ ಈಗ ಇಲ್ಲವೇ ಇಲ್ಲ.. ಮಾಯವಾಗಿಬಿಟ್ಟಿದೆ .. ಮಹಾರಾಜರು ಬಿಡಿ ಅವರ ಕುದುರೆ ಬಂದರೂ ನಿಮ್ಮನ್ನು ತಿರಸ್ಕರಿಸಿ ಬಿಡುತ್ತದೆ.. 

ಮೋದಿಜೀ ಎಲ್ಲಾದರೂ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ನೋಡಲು ಹೋದರೆ ಭಾರೀ ಅಪಾಯ .. ಏಕೆಂದರೆ ಅಲ್ಲೇಲ್ಲಾದರೂ ಭಾರತ ತಂಡಕ್ಕೆ ಸ್ವಲ್ಪ ಸಮಸ್ಯೆಯಾದರೆ  ಅವರ ಅಂಧ ಭಕ್ತರು ಮೋದಿಯವರನ್ನೇ ಕ್ರೀಸಿಗೆ ಇಳಿಸಿ ಬಿಡುವ ಸಾಧ್ಯತೆ ಇದೆ.. ಮೋದಿ...ಮೋದಿ... ಮೋದಿ .. ಅರುಣ್ ಜೇಟ್ಲಿ ಬಂದು ಮೋದಿಯವರ ಕಾಲಿಗೆ ಪ್ಯಾಡ್ ಕಟ್ಟುತ್ತಾರೆ .. ಅಮಿತ್ ಶಾ ಅಲ್ಲಿ ಬೌಲರ್ ನ ಕೈ ಕತ್ತರಿಸುತ್ತಾರೆ .. ಬೌಲರ್ ಬಾಯಲ್ಲಿ ಬಾಲ್ ಹಿಡಿದುಕೊಂಡು ಬಂದು ಬೌಲ್ ಮಾಡುತ್ತಾನೆ.. ಎಲ್ಲಾದರೂ ಸ್ಪಿನ್ ಆಗುವುದು ಬೇಡ ಎಂದು ಅವನ ನಾಲಗೆಯನ್ನೂ ಅಮಿತ್ ಶಾ ಕತ್ತರಿಸುತ್ತಾರೆ.. ಹಾಗೆ ಮೋದಿಜೀ ಕಾಲಿಗೆ ತಾಗಿಸಿದ ಕೂಡಲೇ ಫೀಲ್ಡರ್ ಬಾಲನ್ನು ಎತ್ತಿಕೊಂಡು ಹೋಗಿ ಬೌಂಡರಿ ಗೆರೆಯ ಆಚೆ ಹಾಕಿ ಬಿಡುತ್ತಾನೆ.. ಅಂಪೈರ್ ಸಿಕ್ಸ್ ಎಂದು ಕೈ ಎತ್ತುತ್ತಾನೆ .. ಕಮೆಂಟೇಟರ್ ರಗಳೆಯೇ ಬೇಡ ಎಂದು ಸೆಂಚುರಿ ಎಂದು ಬಿಡುತ್ತಾನೆ .. ರಾತ್ರಿ ಭಾರತೀಯ ಮೀಡಿಯಾಗಳು ಇವತ್ತೇಕೆ ಜೆ ಎನ್ ಯು ನವರು ಮಾತಾಡುತ್ತಿಲ್ಲ ಎಂದು ಕೇಳುತ್ತಾರೆ...

ಐದು ವರ್ಷಗಳಿಂದ ಇಲ್ಲಿ ಒಂದು ಮಾತು ಹೇಳಲಾಗುತ್ತಿದೆ.. ಅದೇನೆಂದರೆ ನಮಗೆ ಬೇರೆ ( ಮೋದಿ ಬಿಟ್ಟು ) ಆಯ್ಕೆ ಇಲ್ಲ..  ಹೌದು ಸರಿ .. ಬೇರೆ ಆಯ್ಕೆ ಇಲ್ಲ ..  ಹಾಗೆ ನಮಗೆ ಬೇಕೇ ಬೇಕು ಎಂದಾದರೆ ನಾವೆಲ್ಲ ಭಾರತೀಯರು ಒಟ್ಟಾಗಿ ವಿಮಾನ ನಿಲ್ದಾಣಗಳಿಗೆ ಹೋಗಿ " ಸೈಮನ್ , ಕಮ್ ಬ್ಯಾಕ್ " ( ಬ್ರಿಟಿಷ್ ಆಡಳಿತದ ಕಾಲದಲ್ಲಿ ಸೈಮನ್ ಗೋ ಬ್ಯಾಕ್ ಎಂದು ಚಳವಳಿ ಮಾಡಿದ್ದಕ್ಕೆ ಪ್ರತಿಯಾಗಿ )  ಎಂದು ಘೋಷಣೆ ಕೂಗಿ ಬ್ರಿಟಿಷರನ್ನು ವಾಪಸ್ ಕರೆಸಿಕೊಳ್ಳಬೇಕು. " ನೀವು 1947 ರಲ್ಲಿ ಬಿಟ್ಟು ಹೋದ ರೈಲ್ವೆ ಕಾಮಗಾರಿಗಳು ಇನ್ನೂ ಅದೇ ಹಂತದಲ್ಲಿವೆ. ಬಂದು ಅವುಗಳನ್ನು ಮುಂದುವರೆಸಿ " ಎಂದು ಕೇಳಿಕೊಳ್ಳಬೇಕು. ಆಗ ಸೈಮನ್ ( ಬ್ರಿಟಿಷ್ ಅಧಿಕಾರಿ ) ಬರುತ್ತಾನೆ. ಆದರೆ ಬಂದ ಕೆಲವೇ ಸಮಯದಲ್ಲಿ  ಆತ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು  ಉತ್ತರ ಪ್ರದೇಶದ ಯಾವುದಾದರೂ ವೃತ್ತದಲ್ಲಿ ನಿಂತುಕೊಂಡು " ಮಂದಿರ್ ವಹೀ ಬನಾಯೇಂಗೆ ... ಮೈ ಬನವುಂಗ " ಎಂದು ಭಾಷಣ ಮಾಡಲು ಪ್ರಾರಂಭಿಸುತ್ತಾನೆ. ಏನಾಯಿತು ನಿನಗೆ.. ನಿನ್ನ ಹೆಸರು ಸೈಮನ್ ಎಂದು ಕೇಳಿದರೆ " ನನ್ನ ಘರ್ ವಾಪ್ಸಿ ಆಗಿದೆ . ಈಗ ನನ್ನ ಹೆಸರು ಸಂಬಿತ್ ಪಾತ್ರ"  ಅಂತ ಹೇಳ್ತಾನೆ !

ಈ ವಿಡಿಯೋ ಒಂದು ಕಡೆಗಿದೆ ಎಂದು ಯಾರಾದರೂ ಹೇಳಿದರೆ .. ಹೌದು ಇಲ್ಲಿ ಎಲ್ಲ ಮಾಧ್ಯಮಗಳು ಒಂದು ಕಡೆಗಿವೆ .. ಮಾರಲ್ಪಟ್ಟಿವೆ .. ಹಾಗಾಗಿ ನಾನು ಅವುಗಳ ಇನ್ನೊಂದು ಕಡೆಗಿದ್ದೇನೆ .. ಅಷ್ಟೇ .

ವಿಡಿಯೋ ಇಲ್ಲಿದೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News