ಸೇನಾ ಕ್ಯಾಂಪ್ ಬಳಿ ಸ್ಫೋಟಕ ಪತ್ತೆ: ಬಂಧಿತ ರಾಜೀಂದರ್ ಸಿಂಗ್ ಬಳಿ ಗ್ರೆನೇಡ್ ಗಳು, ಡಿಟೊನೇಟರ್

Update: 2019-03-11 14:31 GMT

ಜಮ್ಮು, ಮಾ.11: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೇನಾ ಕ್ಯಾಂಪ್ ಹೊರಗಡೆ ಎರಡು ಗ್ರೆನೇಡ್ ಗಳು ಮತ್ತು ಒಂದು ಡಿಟೊನೇಟರ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ರಾಜೀಂದರ್ ಸಿಂಗ್ ಎಂದು ಗುರುತಿಸಲಾಗಿದೆ.

ಈತ ಕಾಲಕೋಟೆಯ ನಿವಾಸಿ ಎನ್ನಲಾಗಿದ್ದು, ನೇಮಕಾತಿ ರ್ಯಾಲಿಗೆಂದು ಆಗಮಿಸಿದ್ದ ಎನ್ನಲಾಗಿದೆ. ಗ್ರೆನೇಡ್ ಮತ್ತು ಡಿಟೊನೇಟರ್ ಗಳನ್ನು ಹೊಂದಿದ್ದ ಈತ ಸೇನಾ ಕ್ಯಾಂಪ್ ಹೊರಗಡೆ ಅತ್ತಿತ್ತ ಹೋಗುತ್ತಿದ್ದ ಎಂದು ಅಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆತನಿಂದ ಸಿ-90 ಗ್ರೆನೇಡ್, ಯುಬಿಜಿಎಲ್ ಗ್ರೆನೇಡ್ ಮತ್ತು ಡಿಟೊನೇಟರನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಬಂಧಿತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಆತನಿಗೆ ಸ್ಫೋಟಕಗಳೆಲ್ಲಿಂದ ಸಿಕ್ಕಿತ್ತು ಮತ್ತು ಆತನ ಉದ್ದೇಶವೇನಾಗಿತ್ತು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಬೆಳಗ್ಗೆ 10:15ಕ್ಕೆ ಸೇನಾ ಕ್ಯಾಂಪ್ ಸಮೀಪ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ವ್ಯಕ್ತಿಯೊಬ್ಬನನ್ನು ಸೈನಿಕರೊಬ್ಬರು ಗಮನಿಸಿದ್ದರು. ನಂತರ ಆತನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News