ಭಿಂಡ್ರನವಾಲೆಯ ಸಹವರ್ತಿಯಾಗಿದ್ದ ಕೆಸಿಎಫ್ ಉಗ್ರ ಪೊಲೀಸರ ಬಲೆಯಲ್ಲಿ
ದಿಲ್ಲಿ,ಮಾ.13: ನಿಷೇಧಿತ ಭಯೋತ್ಪಾದಕ ಗುಂಪು ಖಲಿಸ್ತಾನ್ ಕಮಾಂಡೋ ಫೋರ್ಸ್(ಕೆಸಿಎಫ್)ನ ಸದಸ್ಯ ಹಾಗೂ 1984ರ 'ಆಪರೇಷನ್ ಬ್ಲೂ ಸ್ಟಾರ್'ನಲ್ಲಿ ಭಾರತೀಯ ಸೇನೆಯಿಂದ ಕೊಲ್ಲಲ್ಪಟ್ಟಿದ್ದ ಜರ್ನೈಲ್ ಸಿಂಗ್ ಭಿಂಡ್ರನವಾಲೆಯ ಸಹವರ್ತಿಯಾಗಿದ್ದ ಗುರುಸೇವಕ್ ಸಿಂಗ್(53)ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಕೆಸಿಎಫ್ ಮುಖ್ಯಸ್ಥ ಪರಮಜೀತ್ ಸಿಂಗ್ ಪಂಜ್ವಾಡ ನಿರ್ದೇಶದ ಮೇರೆಗೆ ತನ್ನ ಗುಂಪನ್ನು ಮರುಸಂಘಟಿಸುವ ಯೋಜನೆಯನ್ನು ಸಿಂಗ್ ಹೊಂದಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಜಿತಕುಮಾರ್ ಸಿಂಗ್ಲಾ ಅವರು ಬುಧವಾರ ಇಲ್ಲಿ ತಿಳಿಸಿದರು.
ತಿಹಾರ ಜೈಲು ಸೇರಿದಂತೆ ಭಾರತದ ವಿವಿಧ ಜೈಲುಗಳಲ್ಲಿರುವ ಜಗ್ತಾರ್ ಸಿಂಗ್ ಹಾವರಾ ಮತ್ತು ಇತರ ಭಯೋತ್ಪಾದಕರೊಂದಿಗೂ ಸಿಂಗ್ ಸಂಪರ್ಕದಲ್ಲಿದ್ದ. ಮಾ.12ರಂದು ತನ್ನ ಸಂಪರ್ಕ ವ್ಯಕ್ತಿಯೋರ್ವನನ್ನು ಭೇಟಿಯಾಗಲು ದಿಲ್ಲಿಗೆ ಬಂದಿದ್ದ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದರು.
ಸಿಂಗ್ ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳು,ಪೊಲೀಸ್ ಅಧಿಕಾರಿಗಳು ಮತ್ತು ಬಾತ್ಮೀದಾರರ ಕೊಲೆಗಳು,ಬ್ಯಾಂಕುಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಲೂಟಿ ಸೇರಿದಂತೆ 50ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 26 ವರ್ಷಗಳಿಗೂ ಹೆಚ್ಚು ಸಮಯ ಜೈಲಿನಲ್ಲಿದ್ದ ಆತ ಪಾಕಿಸ್ತಾನದಲ್ಲಿ ನೆಲೆಯೂರಿರುವ ಕೆಲವು ಭಯೋತ್ಪಾದಕರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದ ಎಂದರು.
2010ರಲ್ಲಿ ಜೈಲಿನಿಂದ ಹೊರಗೆ ಬಂದ ಬಳಿಕ ಸಿಂಗ್ ಹಲವಾರು ಲೂಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಲುಧಿಯಾನಾ ಪೊಲೀಸರಿಂದ 2014,2015 ಮತ್ತು 2016ರಲ್ಲಿ ಬಂಧಿತನಾಗಿದ್ದ. ಈ ಅವಧಿಯಲ್ಲಿ ಆತ ಪಂಜ್ವಾಡ ಜೊತೆ ಸಂಪರ್ಕದಲ್ಲಿದ್ದ. 2017ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಸಿಂಗ್‌ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಆತನ ವಿರುದ್ಧ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದು,ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿತ್ತು ಎಂದು ಸಿಂಗ್ಲಾ ತಿಳಿಸಿದರು.