ಬಂಧಿತ ಕಾರ್ಯಕರ್ತರು ಸರಕಾರವನ್ನು ಉರುಳಿಸಲು ದಲಿತ ಸಂಘಟನೆಯಲ್ಲಿ ತೊಡಗಿದ್ದರು: ಪೊಲೀಸರ ಆರೋಪ

Update: 2019-03-13 15:47 GMT

 ಮುಂಬೈ,ಮಾ.13: ಭೀಮಾ-ಕೋರೆಗಾಂವ್ ಹಿಂಸಾಚಾರ ಮತ್ತು ಮಾವೋವಾದಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಸಾಮಾಜಿಕ ಕಾರ್ಯಕರ್ತರು ‘ಸರಕಾರವನ್ನು ಉರುಳಿಸುವ’ ಸಿಪಿಐ(ಮಾವೋವಾದಿ)ನ ಉದ್ದೇಶ ಸಾಧನೆಗಾಗಿ ದಲಿತರನ್ನು ಕ್ರೋಢೀಕರಿಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಬುಧವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬಂಧಿತರ ಪೈಕಿ ಫೆರೆರಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಪುಣೆಯ ಎಸಿಪಿ ಶಿವಾಜಿ ಪವಾರ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಅಫಿದಾವತ್‌ನಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ.

ಫೆರೆರಾ ಮತ್ತು ಇನ್ನೋರ್ವ ಬಂಧಿತ ವರ್ನನ್ ಗೊನ್ಸಾಲ್ವೀಸ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಬುಧವಾರ ಕೈಗೆತ್ತಿಕೊಂಡ ನ್ಯಾ.ಪಿ.ಎನ್.ದೇಶಮುಖ ಅವರು ವಿಚಾರಣೆಯನ್ನು ಎ.5ಕ್ಕೆ ಮುಂದೂಡಿದರು.

ಫೆರೀರಾ,ಗೊನ್ಸಾಲ್ವೀಸ್,ಸುಧಾ ಭಾರದ್ವಾಜ್,ಪಿ.ವರವರ ರಾವ್,ಗೌತಮ ನವಲಾಖಾ ಮತ್ತು ಆನಂದ ತೇಲ್ತುಂಬ್ಡೆ ಸೇರಿದಂತೆ ಎಂಟು ಸಾಮಾಜಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.

ಗೊನ್ಸಾಲ್ವೀಸ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಅಫಿದಾವತ್‌ನ್ನು ಪೊಲೀಸರು ಇನ್ನಷ್ಟೇ ಸಲ್ಲಿಸಬೇಕಿದೆ.

ಫೆರೆರಾ ಮತ್ತು ಇತರ ಬಂಧಿತರು ನಿಷೇಧಿತ ಸಂಘಟನೆಯಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿ)ದ ಹಿರಿಯ ಸಕ್ರಿಯ ಸದಸ್ಯರಾಗಿದ್ದು,ಸರಕಾರವನ್ನು ಉರುಳಿಸಲು ಸಂಘಟನೆಯ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದರು ಮತ್ತು ಪ್ರಚಾರದಲ್ಲಿ ತೊಡಗಿಕೊಂಡಿದ್ದರು ಎಂದು ಪುಣೆ ಪೊಲೀಸರು ಅಫಿದಾವತ್‌ನಲ್ಲಿ ಪ್ರತಿಪಾದಿಸಿದ್ದಾರೆ.

ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಸಿಪಿಐ(ಮಾವೋವಾದಿ)ನ ಉದ್ದೇಶವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು,ಅದಕ್ಕಾಗಿ ಅದು ಬೃಹತ್ ಪ್ರಮಾಣದಲ್ಲಿ ಜನರನ್ನು ಕ್ರೋಢೀಕರಿಸುವ ಮೂಲಕ ಜನತಾ ಸಮರವನ್ನು ನಡೆಸುತ್ತಿದೆ. ಅದು ದಲಿತ ಸಮುದಾಯಗಳಲ್ಲಿ ಪಕ್ಷವನ್ನು ಸಂಘಟಿಸಲು ಪ್ರಯತ್ನಿಸುತ್ತಿದೆ. ತನ್ನ ಉದ್ದೇಶ ಸಾಧನೆಗಾಗಿ ಅದು ತಮ್ಮ ಆತ್ಮಗೌರವಕ್ಕಾಗಿ ಮತ್ತು ಮೇಲ್ಜಾತಿಗಳ ಊಳಿಗಮಾನ್ಯ ಶಕ್ತಿಗಳ ದೌರ್ಜನ್ಯಗಳ ವಿರುದ್ಧ ದಲಿತರ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಅವರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎಂದು ಅಫಿದಾವತ್‌ನಲ್ಲಿ ಹೇಳಲಾಗಿದೆ.

2017,ಡಿ.31ರಂದು ನಡೆದಿದ್ದ ಎಲ್ಗಾರ್ ಪರಿಷದ್‌ನ ಸಭೆಯಲ್ಲಿ ಫೆರೆರಾ ಮತ್ತು ಇತರ ಆರೋಪಿಗಳು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದು,ದಲಿತ ಸಂಘಟನೆಗಳು ಗಣನೀಯ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದವು. ಸಿಪಿಐ(ಮಾವೋವಾದಿ) ಈ ಸಭೆಗೆ ಆರ್ಥಿಕ ನೆರವು ಒದಗಿಸಿತ್ತು ಮತ್ತು ಅದರ ಕೆಲವು ಸಕ್ರಿಯ ಸದಸ್ಯರು ಈ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿದ್ದರು ಎಂದಿರುವ ಪೊಲೀಸರು,ಹಿಂಸಾತ್ಮಕ ಮಾರ್ಗಗಳ ಮೂಲಕ ಚುನಾಯಿತ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಉರುಳಿಸುವುದು ಫೆರೆರಾ ಮತ್ತು ಇತರ ಆರೋಪಿಗಳು ಹಾಗೂ ಸಿಪಿಐ(ಮಾವೋವಾದಿ)ಯ ಉದ್ದೇಶವಾಗಿದೆ. ಪ್ರಮುಖ ಸಾರ್ವಜನಿಕ ವ್ಯಕ್ತಿಗಳ ಹತ್ಯೆ ಮತ್ತು ಭಯೋತ್ಪಾದನೆ ಅವರ ಗುರಿಯಾಗಿದೆ ಎಂದಿದ್ದಾರೆ.

ಫೆರೆರಾ ಮತ್ತು ಇತರ ಆರೋಪಿಗಳು ಧರ್ಮ,ಜಾತಿ ಮತ್ತು ಸಮುದಾಯದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಲು ಕರಪತ್ರಗಳು ಮತ್ತು ಕಿರುಪುಸ್ತಕಗಳನ್ನು ವಿತರಿಸಿದ್ದರು ಹಾಗೂ ತನ್ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡಿದ್ದರು ಎಂದು ಅಫಿದಾವತ್‌ನಲ್ಲಿ ಹೇಳಿರುವ ಪೊಲೀಸರು, ಆರೋಪಿಗಳ ಸಭೆಗಳು ಮತ್ತು ಭಾಷಣಗಳಿಂದಾಗಿಯೇ ಭೀಮಾ-ಕೋರೆಗಾಂವ್ ಹಿಂಸಾಚಾರ ಸಂಭವಿಸಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News