×
Ad

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕು: ಬಿಹಾರ ಮಾಜಿ ಸಿಎಂ ಮಾಂಝಿ

Update: 2019-03-13 21:04 IST

ಪಾಟ್ನಾ,ಮಾ.13: ಲೋಕಸಭಾ ಚುನಾವಣೆಗಳ ಬಳಿಕ ‘ಮಹಾಮೈತ್ರಿ ಕೂಟ’ವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗುವುದರ ಬಗ್ಗೆ ತಾನು ಒಲವು ಹೊಂದಿದ್ದೇನೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ಥಾನಿ ಆವಾಮ್ ಮಂಚ್(ಎಚ್‌ಎಎಂ)ನ ಅಧ್ಯಕ್ಷ ಜಿತನ್ ರಾಮ್ ಮಾಂಝಿ ಅವರು ಬುಧವಾರ ಇಲ್ಲಿ ಹೇಳಿದರು.

ಬಿಹಾರ ಮಹಾಮೈತ್ರಿಯ ಪಾಲುದಾರ ಪಕ್ಷಗಳ ನಡುವೆ ಸ್ಥಾನಹಂಚಿಕೆ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಪಕ್ಷಕ್ಕೆ ರಾಜ್ಯದಲ್ಲಿ ಒಂದೆರಡು ಸ್ಥಾನಗಳು ದೊರೆಯುವ ಸಾಧ್ಯತೆಯಿದೆ ಎಂದರು. ಬಿಹಾರ 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆಗಳಲ್ಲಿ ಹೋರಾಡುವುದಾಗಿ ಎನ್‌ಡಿಎ ಸ್ಪಷ್ಟಪಡಿಸಿದೆ. ಮಹಾ ಮೈತ್ರಿಕೂಟ ಅಥವಾ ಯುಪಿಎ ಇಂತಹ ಯಾವುದೇ ಪ್ರಕಟಣೆಯನ್ನು ಮಾಡಿಲ್ಲ. ಚುನಾವಣೆಗಳ ನಂತರವೇ ಪ್ರಧಾನಿ ಹುದ್ದೆಯ ಬಗ್ಗೆ ನಿರ್ಧರಿಸಲು ಸಹಮತವಿದೆ. ಆದರೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂದು ತಾನು ವೈಯಕ್ತಿಕವಾಗಿ ಭಾವಿಸಿದ್ದೇನೆ ಎಂದರು.

ನಿರೀಕ್ಷೆಗಿಂತ ಕಡಿಮೆ ಕ್ಷೇತ್ರಗಳನ್ನು ನೀಡಿದರೆ ಪಕ್ಷದ ನಿಲುವೇನು ಎಂಬ ಪ್ರಶ್ನೆಗೆ ಮಾಂಝಿ,ನಾವು ಸಂಧಾನ ಸೂತ್ರವೊಂದನ್ನು ರೂಪಿಸುತ್ತೇವೆ ಎಂದು ಉತ್ತರಿಸಿದರು.

ಲೋಕಸಭಾ ಚುನಾವಣೆಯಲ್ಲಿ ತನ್ನ ಸ್ಪರ್ಧೆಯ ಕುರಿತು ಪ್ರಶ್ನೆಯಿಂದ ನುಣುಚಿಕೊಂಡ ಅವರು,ಸ್ಥಾನ ಹಂಚಿಕೆ ಅಂತಿಮಗೊಂಡ ನಂತರವೇ ಅಭ್ಯರ್ಥಿಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದರು.

ಮಾಂಝಿ ಗಯಾದಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. 2014ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News