ರಫೇಲ್ ಒಪ್ಪಂದದ ದಾಖಲೆಗಳ ಫೋಟೊಕಾಪಿಯಿಂದ ದೇಶದ ಭದ್ರತೆಗೆ ಅಪಾಯ: ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ

Update: 2019-03-13 15:43 GMT

ಹೊಸದಿಲ್ಲಿ, ಮಾ. 13: ರಫೇಲ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ಡಿಸೆಂಬರ್‌ನಲ್ಲಿ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ಜೊತೆಗೆ ಲಗತ್ತಿಸಲಾದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳು ರಾಷ್ಟ್ರದ ಭದ್ರತೆಗೆ ಅಪಾಯ ತಂದೊಡ್ಡಿದೆ. ಆದುದರಿಂದ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸುವಂತೆ ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿದೆ.

 ಮರು ಪರಿಶೀಲನಾ ಅರ್ಜಿ ತಿರಸ್ಕರಿಸುವಂತೆ ಹಾಗೂ ರಕ್ಷಣಾ ಸಚಿವಾಲಯದಿಂದ ಫೊಟೋಕಾಪಿ ಮಾಡುವ ಮೂಲಕ ರಫೇಲ್ ಒಪ್ಪಂದದ ದಾಖಲೆಗಳನ್ನು ಸೋರಿಕೆ ಮಾಡಿರುವುದು ಕಳವಿನ ಕೃತ್ಯಕ್ಕೆ ಸರಿಸಮಾನ ಎಂದು ಪರಿಗಣಿಸುವಂತೆ ಸಚಿವಾಲಯ ಅಫಿದಾವಿತ್‌ನಲ್ಲಿ ಹೇಳಿದೆ. ಅಲ್ಲದೆ ಯುದ್ಧ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿರು ವುದರಿಂದ ದೇಶದ ಭದ್ರತೆಗೆ ಸಂಬಂಧಿಸಿ ಇದು ಅತಿ ಸೂಕ್ಷ್ಮ ದಾಖಲೆಗಳು ಎಂದು ಅಫಿದಾವಿತ್ ಪ್ರತಿಪಾದಿಸಿದೆ.

ಅತಿಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿರುವ ಬಗ್ಗೆ ಫೆಬ್ರವರಿ 28ರಂದು ಆಂತರಿಕ ತನಿಖೆ ಆರಂಭವಾಗಿದೆ. ಇದು ಪ್ರಗತಿಯಲ್ಲಿದೆ. ಈ ಸೋರಿಕೆ ಎಲ್ಲಿ ಸಂಭವಿಸಿತು ಎಂಬ ಬಗ್ಗೆ ಈ ತನಿಖೆ ಗಮನ ಕೇಂದ್ರೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

 ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯೊಂದಿಗೆ ಲಗತ್ತಿಸಲಾದ ದಾಖಲೆಗಳು ವ್ಯಾಪಕವಾಗಿ ಪ್ರಸಾರವಾಗಿದೆ ಹಾಗೂ ಅದು ದೇಶದ ಶತ್ರುಗಳು ಹಾಗೂ ಎದುರಾಳಿಗಳಿಗೆ ಲಭ್ಯವಾಗಿದೆ ಎಂದು ಅಫಿದಾವಿತ್‌ನಲ್ಲಿ ಸರಕಾರ ಹೇಳಿದೆ.

ಇದು ದೇಶದ ಭದ್ರತೆಗೆ ಅಪಾಯ ತಂದಿದೆ. ಕೇಂದ್ರ ಸರಕಾರದ ಅನುಮತಿ ಇಲ್ಲದೆ ಈ ಅತಿಸೂಕ್ಷ್ಮ ದಾಖಲೆಗಳನ್ನು ಫೋಟೋಕಾಪಿ ಮಾಡಿರುವುದರಿಂದ ದೇಶ ಸೌರ್ವಭೌಮತೆ, ಭದ್ರತೆ ಹಾಗೂ ವಿದೇಶಗಳೊಂದಿಗಿನ ಸ್ನೇಹದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಅಫಿದಾವಿತ್ ಸಲ್ಲಿಸಿದ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಹೇಳಿದ್ದಾರೆ.

 ಕೇಂದ್ರ ಸರಕಾರ ರಹಸ್ಯವನ್ನು ನಿರ್ವಹಿಸಿದ ಹೊರತಾಗಿಯೂ ಮರು ಪರಿಶೀಲನಾ ಮನವಿ ಒಪ್ಪಂದದ ಶರತ್ತನ್ನು ಉಲ್ಲಂಘಿಸಿ ಅತಿಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡುವ ತಪ್ಪೆಸಗಿದೆ ಎಂದು ಅಫಿದಾವಿತ್ ಹೇಳಿದೆ.

ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತ ಆಂತರಿಕ ರಹಸ್ಯ ಮಾತುಕತೆಗಳಲ್ಲಿ ಕೆಲವನ್ನು ಆಯ್ಕೆ ಮಾಡಿ, ಅಸಂಪೂರ್ಣ ಚಿತ್ರಣವನ್ನು ಪ್ರಸ್ತುತಪಡಿಸಿ ತಮ್ಮ ಉದ್ದೇಶವನ್ನು ಈಡೇರಿಸಲು ಅನಧಿಕೃತವಾಗಿ ಲಭ್ಯವಾದ ದಾಖಲೆಗಳನ್ನು ದೂರುದಾರರು ಬಳಸಿಕೊಂಡಿದ್ದಾರೆ ಎಂದು ಅಫಿದಾವಿತ್ ತಿಳಿಸಿದೆ.

ರಫೇಲ್ ಒಪ್ಪಂದದ ಕುರಿತು ಸಿಬಿಐ ತನಿಖೆ ನಡೆಸುವಂತೆ ಸಲ್ಲಿಸಲಾಗಿದ್ದ ಮನವಿ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಡಿಸೆಂಬರ್‌ನಲ್ಲಿ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮನವಿಗಳ ಗುಚ್ಛವನ್ನು ಸುಪ್ರೀಂ ಕೋರ್ಟ್ ಆಲಿಕೆ ನಡೆಸಿತು ಹಾಗೂ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News