ಹಿಮಾಚಲ ಪ್ರದೇಶದ ಅಶ್ವನಿ ಖಡ್ ಕುರಿತು ಕ್ರಮಾನುಷ್ಠಾನ ವರದಿ ಕೇಳಿದ ಎನ್‌ಜಿಟಿ

Update: 2019-03-13 15:44 GMT

ಹೊಸದಿಲ್ಲಿ,ಮಾ.13: ಅಶ್ವನಿ ಖಡ್ ನದಿಯನ್ನು ಸ್ವಚ್ಛಗೊಳಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವರದಿಯೊಂದನ್ನು ಎ.30ರೊಳಗೆ ತನಗೆ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಹಿಮಾಚಲ ಪ್ರದೇಶ ಸರಕಾರಕ್ಕೆ ಸೂಚಿಸಿದೆ. ಈ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗಳು ಹರಿಯುತ್ತಿರುವುದನ್ನು ತೋರಿಸಿದ್ದ ವೀಡಿಯೊವೊಂದು ಕಳೆದ ವರ್ಷ ವೈರಲ್ ಆಗಿತ್ತು.

ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್‌ಜಿಟಿಯು,ಅದರಲ್ಲಿಯ ವಿಷಯವನ್ನು ದೃಢಪಡಿಸುವಂತೆ ಮತ್ತು ವಿವರವಾದ ವರದಿಯನ್ನು ಸಲ್ಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶ ನೀಡಿತ್ತು. ಮಂಡಳಿಯು ಶಿಮ್ಲಾ ಮಹಾನಗರ ಪಾಲಿಕೆ ಮತ್ತು ಸೋಲನ್ ನಗರಸಭೆಗೆ ಪರಿಸರ ಕಾಯ್ದೆಯ ಉಲ್ಲಂಘನೆಗಾಗಿ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.

ಎನ್‌ಜಿಟಿ ಅಧ್ಯಕ್ಷ ನ್ಯಾ.ಆದರ್ಶ ಕುಮಾರ್ ಗೋಯೆಲ್ ಅವರ ನೇತೃತ್ವದ ಪೀಠದೆದುರು ನಡೆದ ವಿಚಾರಣೆ ಸಂದರ್ಭ ನದಿಯಲ್ಲಿ ಘನತ್ಯಾಜ್ಯ ವಿಸರ್ಜನೆಯನ್ನು ತಡೆಯಲು ತಾವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಉಭಯ ಸ್ಥಳೀಯ ಸಂಸ್ಥೆಗಳು ತಿಳಿಸಿದವು.

 ಸೋಲನ್ ಜಿಲ್ಲೆಯ ಸೆರಿ ಬಳಿ ಹರಿಯುತ್ತಿರುವ ಅಶ್ವನಿ ಖಡ್ 2017ರವರೆಗೂ ಶಿಮ್ಲಾಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News