ಐದನೇ ಏಕದಿನದಲ್ಲಿ ಭಾರತಕ್ಕೆ ಸೋಲು; ಸರಣಿ ಜಯಿಸಿದ ಆಸ್ಟ್ರೇಲಿಯ

Update: 2019-03-13 15:56 GMT

ಹೊಸದಿಲ್ಲಿ, ಮಾ.13: ಉಸ್ಮಾನ್ ಖ್ವಾಜಾ ಗಳಿಸಿದ ಆಕರ್ಷಕ ಶತಕ, ಬೌಲರ್‌ಗಳ ಸಂಘಟಿತ ಬೌಲಿಂಗ್ ದಾಳಿಯ ಸಹಾಯದಿಂದ ಆಸ್ಟ್ರೇಲಿಯ ತಂಡ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತವನ್ನು 35 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ. ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ ಆರಂಭಿಕ ಆಟಗಾರ ಖ್ವಾಜಾ ಶತಕ (100, 106 ಎಸೆತ)ಹಾಗೂ ಹ್ಯಾಂಡ್ಸ್‌ಕಾಂಬ್(52) ಅರ್ಧಶತಕದ ಕೊಡುಗೆ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 272 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಗೆಲ್ಲಲು ಕಠಿಣ ಸವಾಲು ಪಡೆದ ಭಾರತ 50 ಓವರ್‌ಗಳಲ್ಲಿ 237 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ(56, 89 ಎಸೆತ, 4 ಬೌಂಡರಿ) ಅರ್ಧಶತಕ ಗಳಿಸಿ ಏಕಾಂಗಿ ಹೋರಾಟ ನೀಡಿದರು. ಶಿಖರ್ ಧವನ್(12)5ನೇ ಓವರ್‌ನಲ್ಲಿ 12 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು.

ಆಗ ಜೊತೆಯಾದ ನಾಯಕ ವಿರಾಟ್ ಕೊಹ್ಲಿ(20) ಹಾಗೂ ರೋಹಿತ್ 2ನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ತಂಡ ಮತ್ತೆ ಹಿನ್ನಡೆ ಅನುಭವಿಸಿತು.

ಭಾರತ 29ನೇ ಓವರ್‌ನಲ್ಲಿ 132 ರನ್‌ಗೆ ಆರು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆಲ್‌ರೌಂಡರ್ ಕೇದಾರ್ ಜಾಧವ್(44) ಹಾಗೂ ಭುವನೇಶ್ವರ ಕುಮಾರ್(46) 7ನೇ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿ ಒಂದಷ್ಟು ಪ್ರತಿರೋಧ ಒಡ್ಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.

ಆಸ್ಟ್ರೇಲಿಯದ ಪರ ಸ್ಪಿನ್ನರ್ ಆ್ಯಡಮ್ ಝಾಂಪ(3-46) ಯಶಸ್ವಿ ಬೌಲರ್ ಎನಿಸಿಕೊಂಡರು. ಕಮಿನ್ಸ್(2-38), ರಿಚರ್ಡ್‌ಸನ್(2-47) ಹಾಗೂ ಸ್ಟೋನಿಸ್(2-31)ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News