ನನಗೆ ಟಿಕೆಟ್ ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಬಿಜೆಪಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

Update: 2019-03-13 16:43 GMT

ಹೊಸದಿಲ್ಲಿ,ಮಾ.13: ಲೋಕಸಭಾ ಚುನಾವಣೆಗಾಗಿ ತನ್ನ ಕ್ಷೇತ್ರದಲ್ಲಿ ಇತರ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಪರಿಣಾಮವು ನೆಟ್ಟಗಿರುವುದಿಲ್ಲ ಎಂದು ಉತ್ತರ ಪ್ರದೇಶದ ಉನ್ನಾವೊದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಪಕ್ಷಕ್ಕೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ಸೋರಿಕೆಯಾಗಿದ್ದ ಪತ್ರವೊಂದರಲ್ಲಿ ಸಾಕ್ಷಿ 2014ರ ಚುನಾವಣೆಯಲ್ಲಿ ತಾನು 3.15 ಲ.ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನ್ನು ರಾಜ್ಯ ಬಿಜೆಪಿ ವರಿಷ್ಠ ಮಹೇಂದ್ರನಾಥ ಪಾಂಡೆ ಅವರಿಗೆ ನೆನಪಿಸಿದ್ದರು.

ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಸಾಕ್ಷಿ(63) ವ್ಯಕ್ತಪಡಿಸಿದ್ದಾರೆ. ತನ್ನ ಮಟ್ಟಿಗೆ ಹೇಳುವುದಾದರೆ ತನಗೆ ಟಿಕೆಟ್ ಖಚಿತವಾಗಿದೆ ಎಂದು ನಂಬಿದ್ದೇನೆ ಎಂದು ಅವರು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

 ಆದರೆ ತನಗೆ ಸಂಬಂಧಿಸಿದಂತೆ ಪಕ್ಷವು ಇತರ ಯಾವುದೇ ನಿರ್ಧಾರವನ್ನು ಕೈಗೊಂಡರೆ ರಾಜ್ಯದ ಜನರಿಗೆ ನೋವಾಗುವ ಎಲ್ಲ ಸಾಧ್ಯತೆಗಳಿವೆ ಮತ್ತು ಪರಿಣಾಮ ಒಳ್ಳೆಯದಾಗಿರುವುದಿಲ್ಲ ಎಂದು ಹೇಳಿರುವ ಅವರು,ತಾನು ಪಾಂಡೆಯವರಿಗೆ ಬರೆದಿದ್ದ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಗಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದ ಪ್ರಬಲ ಸವಾಲನ್ನೆದುರಿಸುತ್ತಿದೆ. ಅಲ್ಲದೆ ಸಣ್ಣ ಪ್ರಾದೇಶಿಕ ಮಿತ್ರಪಕ್ಷಗಳೂ ಎನ್‌ಡಿಎ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿರುವುದರಿಂದ ಅದರ ಸಂಕಷ್ಟ ಇನ್ನಷ್ಟು ಹೆಚ್ಚಿದೆ.

ತನ್ನ ವಿವಾದಾತ್ಮಕ ಹೇಳಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುವ ಸಾಕ್ಷಿ ಪಕ್ಷದ ಪಾಲಿಗೆ ಪ್ರಮುಖ ತಾರಾ ಪ್ರಚಾರಕರಾಗಿದ್ದಾರೆ. ಕಳೆದ ವರ್ಷ ಅವರು ದಿಲ್ಲಿಯ ಜಾಮಾ ಮಸೀದಿಯನ್ನು ನೆಲಸಮಗೊಳಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News