ಸತ್ಯವು ಪ್ರಧಾನಿ ಮೋದಿಯನ್ನು ಜೈಲಿಗೆ ಕಳುಹಿಸಲಿದೆ: ರಾಹುಲ್

Update: 2019-03-13 16:45 GMT

ಚೆನ್ನೈ,ಮಾ.13: ಕೇಂದ್ರವು ಜನರಿಗೆ ಸುಳ್ಳುಗಳನ್ನು ಹೇಳುತ್ತಿದೆ ಎಂದು ಬುಧವಾರ ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ಸತ್ಯವು ಪ್ರಧಾನಿಯನ್ನು ಜೈಲಿಗೆ ಕಳುಹಿಸಲಿದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

ರಾಜ್ಯದ ನಾಗರಕೋಯಿಲ್‌ನಲ್ಲಿ ತನ್ನ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಮೂಲಕ ತಮಿಳುನಾಡಿನಲ್ಲಿ ಯುಪಿಎಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್,ರಫೇಲ್ ಒಪ್ಪಂದದಲ್ಲಿ ಪ್ರಧಾನಿ ವಿರುದ್ಧ ತನ್ನ ಆರೋಪಗಳನ್ನು ಪುನರುಚ್ಚರಿಸಿದರು. ನರೇಂದ್ರ ಮೋದಿ ಸರಕಾರವು ರಫೇಲ್ ಒಪ್ಪಂದಕ್ಕಾಗಿ ಸರಕಾರಿ ಸ್ವಾಮ್ಯದ ಎಚ್‌ಎಎಲ್‌ನ ಬದಲು ಅನಿಲ್ ಅಂಬಾನಿಯವರ ಕಂಪನಿಯ ಬಗ್ಗೆ ಒಲವು ವ್ಯಕ್ತಪಡಿಸುತ್ತಿದೆ ಎಂದು ಅವರು ಆರೋಪಿಸಿದರು.

ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 9 ಮತ್ತು ಪುದುಚೇರಿಯ ಏಕೈಕ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

ಮಹಾನ್ ತಮಿಳು ಕವಿ ತಿರುವಳ್ಳುವಾರ್ ಅವರು ಸತ್ಯವು ನಿಮ್ಮನ್ನು ವಿಮೋಚನೆಗೊಳಿಸುತ್ತದೆ ಎಂದು ಹೇಳಿದ್ದರು. ಆದರೆ ಇದು ಮೋದಿಯವರಿಗೆ ಅನ್ವಯಿಸುವುದಿಲ್ಲ, ಏಕೆಂದರೆ ಸತ್ಯವು ಅವರನ್ನು ಜೈಲಿಗಟ್ಟಲಿದೆ ಎಂದು ರಾಹುಲ್ ಟೀಕಿಸಿದರು.

ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಎಐಎಡಿಎಂಕೆ ನಡುವೆ ಮೈತ್ರಿಯ ವಿರುದ್ಧವೂ ದಾಳಿ ನಡೆಸಿದ ಅವರು,ರಾಜ್ಯ ಸರಕಾರವು ಈಗ ಪ್ರಧಾನಿ ಕಚೇರಿಯಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಆರೋಪಿಸಿದರು.

ನೋಟು ನಿಷೇಧ,ಜಿಎಸ್‌ಟಿ ಕುರಿತೂ ಅವರು ಪ್ರಧಾನಿಯನ್ನು ಟೀಕಿಸಿದರು.

ಖಚಿತ ಕನಿಷ್ಠ ಆದಾಯದ ತನ್ನ ಭರವಸೆಯನ್ನು ಪುನರುಚ್ಚರಿಸಿದ ರಾಹುಲ್,ಯಾವುದೇ ವ್ಯಕ್ತಿಯ ಆದಾಯವು ಕನಿಷ್ಠ ಆದಾಯ ರೇಖೆಗಿಂತ ಕೆಳಗಿದ್ದರೆ ವ್ಯತ್ಯಾಸವನ್ನು ಸರಕಾರವು ಅಂತಹ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News