ನೆಹರೂ ಪಂಜಾಬನ್ನು ವಿಭಜಿಸಿದರು, ಇಂದಿರಾ ಸ್ವರ್ಣ ಮಂದಿರಕ್ಕೆ ದಾಳಿ ಮಾಡಿದರು: ಕೇಂದ್ರ ಸಚಿವೆ

Update: 2019-03-13 16:49 GMT

ಹೊಸದಿಲ್ಲಿ, ಮಾ.13: ಸಿಖ್ಖರ ಆತ್ಮಸ್ಥೈರ್ಯ ಕುಂದಿಸುವ ಉದ್ದೇಶದಿಂದ ಜವಾಹರಲಾಲ್ ನೆಹರೂ ಪಂಜಾಬನ್ನು ವಿಭಜಿಸಿದರೆ, ಇಂದಿರಾ ಗಾಂಧಿ ಅಮೃತಸರದಲ್ಲಿರುವ ಸ್ವರ್ಣಮಂದಿರಕ್ಕೆ ದಾಳಿ ನಡೆಸಿ ಹಲವಾರು ಅಮಾಯಕರನ್ನು ಹತ್ಯೆ ಮಾಡಿದರು ಎಂದು ಕೇಂದ್ರ ಸಚಿವೆ ಹರ್‌ಸಿಮ್ರಾನ್ ಕೌರ್ ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದಿರಾ ಗಾಂಧಿಯ ಬಳಿಕ ಅಧಿಕಾರಕ್ಕೆ ಬಂದ ಅವರ ಮಗ ರಾಜೀವ್ ಗಾಂಧಿ ರಾಜಕೀಯ ಕಾರಣಕ್ಕಾಗಿ ಎಲ್ಲೆಡೆ ಮಿಲಿಯಾಂತರ ಸಿಖ್ ಜನರ ಸಾಮೂಹಿಕ ಹತ್ಯೆ ನಡೆಸಿದರು. ಈಗ ಅವರ ಮಗ ರಾಹುಲ್ ಗಾಂಧಿ ಪಾಕಿಸ್ತಾನೀಯರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಪಂಜಾಬ್ ವಿಭಜನೆಯಾಗಲು ನೆಹರೂ ಕಾರಣ. ಸಿಖ್ಖರ ಸ್ಥೈರ್ಯಗೆಡಿಸುವ ಏಕೈಕ ಉದ್ದೇಶ ಇದರ ಹಿಂದಿದೆ ಎಂದ ಅವರು, ಅಂತೂ ಕಡೆಗೂ ನಮಗೆ 1984ರ ಅನ್ಯಾಯಕ್ಕೆ ನ್ಯಾಯ ದೊರಕಿದೆ. ಕಡೆಗೂ ನಮಗೆ ಕರ್ಥಾರ್‌ಪುರ ಸಾಹಬ್ ಕಾರಿಡಾರ್ ದೊರೆತಿದೆ. ಈಗ ನೀವು ಪ್ರಧಾನಿ ಮೋದಿ ಹಾಗೂ ಸರಕಾರದ ಬೆಂಬಲಕ್ಕೆ ನಿಲ್ಲದಿದ್ದರೆ, ಈ ಪ್ರಕ್ರಿಯೆಯನ್ನು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ಮಾತುಕತೆ ಮತ್ತು ಭಯೋತ್ಪಾದನೆ ಎಂಬ ನೆಪದಲ್ಲಿ ಹಳಿ ತಪ್ಪಿಸಿ ಬಿಡುತ್ತದೆ ಎಂದರು.

ತನಗೆ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಜೊತೆಗಿರುವ ಆತ್ಮೀಯತೆ ಕರ್ಥಾರ್‌ಪುರ ಕಾರಿಡಾರ್‌ನ ಯಶಸ್ಸಿಗೆ ಕಾರಣ ಎಂಬ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿಕೆಗೆ ಪ್ರತಿಕ್ರಿಯಿಸಿದ ಕೌರ್, ಸಿದು ಪಾಕಿಸ್ತಾನದ ಸರಕಾರದಿಂದ ಒಪ್ಪಿಗೆ ಪಡೆದುಕೊಂಡರು ಎಂದಾದರೆ, ನಮ್ಮ ಸರಕಾರದ ಕಡೆಯಿಂದ ಇದಕ್ಕೆ ಯಾರು ಒಪ್ಪಿಗೆ ಕೊಟ್ಟರು. ಯಾರು ಇದನ್ನು ಸಂಪುಟ ಸಭೆಯಲ್ಲಿ ಅನುಮೋದಿಸಿದರು ಎಂದು ಪ್ರಶ್ನಿಸಿದರು. ಸಿದು ಪಾಕಿಸ್ತಾನದ ಏಜೆಂಟ್. ಅವರು ಪಾಕ್ ಪರ ಮಾತಾಡುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಕೌರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News