ನೀರವ್ ಮೋದಿ ಹಣ ವರ್ಗಾಯಿಸಿದ್ದಕ್ಕೆ ಪುರಾವೆ ಲಭ್ಯ: ಇಡಿ

Update: 2019-03-13 17:01 GMT

ಮುಂಬೈ, ಮಾ.13: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಮಹತ್ವದ ಪುರಾವೆಯನ್ನು ಸಂಗ್ರಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಡಿ ತಂಡ ಬಾರ್ಬಡೋಸ್, ದುಬೈ, ಹಾಂಗ್‌ಕಾಂಗ್ ಇತ್ಯಾದಿ ಬ್ಯಾಂಕ್‌ಗಳ ಸ್ಟೇಟ್‌ಮೆಂಟ್ ಪಡೆದಿದ್ದು ಅದರಲ್ಲಿರುವ ಕೆಲವು ಉಲ್ಲೇಖಗಳು ನೀರವ್ ಮೋದಿ ಅಕ್ರಮ ಹಣ ವರ್ಗಾವಣೆ ನಡೆಸಿರುವುದಕ್ಕೆ ಸಾಕ್ಷಿ ಒದಗಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀರವ್ ಮೋದಿ ವಿರುದ್ಧ ಪ್ರಮುಖ ಸಾಕ್ಷಿಯನ್ನು ಸಂಗ್ರಹಿಸಲಾಗಿದ್ದು, ಅವರು ಅಮೆರಿಕದಲ್ಲಿ ‘ಬೈಲೆ ಬ್ಯಾಂಕ್ ಆ್ಯಂಡ್ ಬಿಡ್ಲ್ ’ ಎಂಬ ಹೆಸರಿನಲ್ಲಿ ಮತ್ತೊಂದು ಸ್ವರ್ಣಾಭರಣದ ಸರಣಿ ಮಳಿಗೆಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ನಕಲಿ ವಾಗ್ದಾನ ಪತ್ರದ ಮೂಲಕ ಸುಮಾರು 327 ಕೋಟಿ ರೂ. ಮೊತ್ತವನ್ನು ಈ ಸಂಸ್ಥೆಗೆ ವರ್ಗಾಯಿಸಲಾಗಿದೆ . ವಿವಿಧ ಮೂಲಗಳಿಂದ ವಿದೇಶದಲ್ಲಿ ಆರಂಭಿಸಲಾಗಿದ್ದ ಹಲವು ನಕಲಿ ಸಂಸ್ಥೆಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದಾಗ ತನಿಖೆಗೆ ಎದುರಾಗಿದ್ದ ಜಟಿಲತೆಯನ್ನು ಬೇಧಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ನೀರವ್ ಅವರ ಓರ್ವ ಸಹೋದರ ನೆಹಾಲ್ ಮೋದಿ ಯುಎಇಯಲ್ಲಿ ಇರಿಸಿದ್ದ ರಹಸ್ಯ ಸರ್ವರ್ ಅನ್ನು ನಾಶಗೊಳಿಸಿದ್ದರು. ಈ ಸರ್ವರ್ ಮೂಲಕ ಆರೋಪಿಗಳು ಹಾಗೂ ಇತರ ನಿಕಟವರ್ತಿಗಳು ಪರಸ್ಪರ ರಹಸ್ಯವಾಗಿ ಸಂಪರ್ಕದಲ್ಲಿದ್ದು ಇದರ ಮೂಲಕ ನಡೆಸಿದ್ದ ಇ-ಮೇಲ್ ವ್ಯವಹಾರಗಳ ದಾಖಲೆಯನ್ನು ದುಬೈಯಿಂದ ಪಡೆದಿರುವುದಾಗಿ ಇಡಿ ತಿಳಿಸಿದೆ.

ಅಲ್ಲದೆ ನೀರವ್ ಮೋದಿಯ ಸಹೋದರಿ ಪೂರ್ವಿ ಹಾಗೂ ಸಹೋದರ ನೀಶಾಲ್ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಮತ್ತು ದುಬೈಯಲ್ಲಿ ನಕಲಿ ಸಂಸ್ಥೆಗಳ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದರು. ದುಬೈಯಲ್ಲಿ ಈ ಸಂಸ್ಥೆಗಳ ಅಧಿಕಾರಿಗಳನ್ನು ಪತ್ತೆ ಹಚ್ಚಿ , ಅವರ ಹೇಳಿಕೆಗಳನ್ನು ಪಿಎಂಎಲ್‌ಎ (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್)ನಡಿ ದಾಖಲಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News