ಕಾಂಗ್ರೆಸ್ ಆಡಳಿತದಲ್ಲಿ 15 ಬಾರಿ ಸರ್ಜಿಕಲ್ ಸ್ಟ್ರೈಕ್: ಅಶೋಕ್ ಗೆಹ್ಲೋಟ್

Update: 2019-03-13 17:27 GMT

ಅಜ್ಮೀರ್, ಮಾ. 13: ರಕ್ಷಣಾ ಪಡೆಯ ಕಾರ್ಯಾಚರಣೆಯನ್ನು ಮೋದಿ ಸರಕಾರ ರಾಜಕೀಯಗೊಳಿಸುತ್ತಿದೆ ಎಂದು ಬುಧವಾರ ಆರೋಪಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಸರಕಾರದ ಆಡಳಿತದ ಸಂದರ್ಭ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ, ಮೋದಿ ಸರಕಾರ ಅದರ ಬಗ್ಗೆ ಎಂದಿಗೂ ಮಾತನಾಡಿಲ್ಲ ಎಂದಿದ್ದಾರೆ.

 ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ, ಮೋದಿ ಸರಕಾರ ಗಾಂಧಿ ಕುಟುಂಬವನ್ನು ಟೀಕಿಸುವ ಹೊರತಾಗಿ ಇದನ್ನು ಪರಿಗಣಿಸಿಲ್ಲ ಎಂದು ಅವರು ತಿಳಿಸಿದರು.

 ''ದೇಶವಾಸಿಗಳು ಅಮಾಯಕರು. ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಅವರು ಭಾವಿಸಿದ್ದಾರೆ. ಆದರೆ, ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ, ಇದನ್ನು ಮೋದಿ ಸರಕಾರ ಎಂದೂ ಹೇಳಿಲ್ಲ'' ಎಂದು ಗೆಹ್ಲೋಟ್ ತಿಳಿಸಿದ್ದಾರೆ.

  ''ಮೋದಿ ಪ್ರಧಾನಿಯಾದ ಬಳಿಕ ಇಸ್ರೋ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ಆದರೆ, ಇದನ್ನು ಮೋದಿ ಅವರ ಆಡಳಿತದ ಅವಧಿಯಲ್ಲಿ ಮಾತ್ರ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು ಎಂದು ಪ್ರತಿಬಿಂಬಿಸಲಾಯಿತು. ವರ್ಷಗಳ ಹಿಂದೆ ಇಂದಿರಾ ಗಾಂಧಿ ಇಸ್ರೋವನ್ನು ರೂಪಿಸಿದ ಬಳಿಕ ನೂರಾರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.'' ಎಂದು ಅವರು ಹೇಳಿದರು.

 ದೇಶದ ಸ್ವಾತಂತ್ರ್ಯಕ್ಕಾಗಿ ಜವಾಹರ್‌ಲಾಲ್ ನೆಹರೂ ಅವರು 12 ವರ್ಷಗಳ ಕಾಲ ಕಾರಾಗೃಹದಲ್ಲಿ ಕಳೆದಿದ್ದರು. ಆದರೆ, ಅವರ ಬಗ್ಗೆ ಬಿಜೆಪಿಯವರು ಸಾಮಾಜಿಕ ಜಾಲ ತಾಣದಲ್ಲಿ ಏನನ್ನು ಪ್ರಸಾರ ಮಾಡುತ್ತಾರೆ ?, ಕಾಂಗ್ರೆಸ್ ಹಾಗೂ ಅದರ ಪರಂಪರೆಯನ್ನು ನಾಶಗೊಳಿಸುವ ಅಭಿಯಾನಕ್ಕೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನೂರಾರು ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News