ಗುಜರಾತ್: ಮಾಜಿ ಶಾಸಕನ ಹತ್ಯೆ ಪ್ರಕರಣ: ಬಿಜೆಪಿ ಮುಖಂಡ ಛಬೀಲ್ ಪಟೇಲ್ ವಶಕ್ಕೆ

Update: 2019-03-14 16:08 GMT

ಗಾಂಧೀನಗರ, ಮಾ.14: ಬಿಜೆಪಿ ಮುಖಂಡ, ಮಾಜಿ ಶಾಸಕ ಜಯಂತಿ ಭಾನುಶಾಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಅರೋಪಿ ಬಿಜೆಪಿಯ ಮುಖಂಡ ಛಬೀಲ್ ಪಟೇಲ್‌ರನ್ನು ‘ಸಿಟ್’ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 8ರಂದು ಕಛ್ ಜಿಲ್ಲೆಯಲ್ಲಿ ಚಲಿಸುತ್ತಿರುವ ರೈಲಿನಲ್ಲೇ ಭಾನುಶಾಲಿಯವರನ್ನು ಶಾರ್ಪ್ ಶೂಟರ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಟೇಲ್, ಕೃತ್ಯ ನಡೆದ ಮುನ್ನಾ ದಿನ ಅಮೆರಿಕಕ್ಕೆ ಪರಾರಿಯಾಗಿದ್ದರು ಎಂದು ವಿಶೇಷ ತನಿಖಾ ದಳ ‘ಸಿಟ್’ ತಿಳಿಸಿದೆ.

ಸುಮಾರು ಎರಡೂವರೆ ತಿಂಗಳ ಬಳಿಕ ಭಾರತಕ್ಕೆ ಮರಳಿದ್ದ ಪಟೇಲ್ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದು ಇಳಿಯುತ್ತಿದ್ದಂತೆಯೇ ವಶಕ್ಕೆ ಪಡೆಯಲಾಗಿದೆ. ಈಗ ನಾವು ವಿಚಾರಣೆ ನಡೆಸುತ್ತಿದ್ದು ಬಳಿಕ ಅವರನ್ನು ವಿಧ್ಯುಕ್ತವಾಗಿ ಬಂಧಿಸಲಾಗುವುದು ಎಂದು ಕ್ರಿಮಿನಲ್ ತನಿಖಾ ವಿಭಾಗದ ಮಹಾನಿರ್ದೇಶಕ ಆಶಿಷ್ ಭಾಟಿಯಾ ತಿಳಿಸಿದ್ದಾರೆ. ಗುಜರಾತ್ ರೈಲ್ವೇ ಪೊಲೀಸ್ ಇಲಾಖೆಯ ಡಿಐಜಿ ಗೌತಮ್ ಪವಾರ್, ಸಿಐಡಿ(ಕ್ರೈಂ) ವಿಭಾಗದ ಅಧಿಕಾರಿಗಳು, ರೈಲ್ವೇ ಪೊಲೀಸ್ ಹಾಗೂ ಅಹ್ಮದಾಬಾದ್ ಕ್ರೈಂಬ್ರಾಂಚ್ ವಿಭಾಗದ ಅಧಿಕಾರಿಗಳ ಸಹಿತ 7 ಸದಸ್ಯರ ಸಿಟ್ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News