ಆಸ್ಟ್ರೇಲಿಯ ವಿರುದ್ಧ ಸೋತ ಭಾರತ: ಉತ್ತರವಿಲ್ಲದ ಹಲವು ಪ್ರಶ್ನೆಗಳು

Update: 2019-03-14 18:17 GMT

ಹೊಸದಿಲ್ಲಿ, ಮಾ.14: ನ್ಯೂಝಿಲೆಂಡ್‌ನಲ್ಲಿ ನಡೆದ ಸೀಮಿತ ಓವರ್ ಕ್ರಿಕೆಟ್ ಹಾಗೂ ಆ ಬಳಿಕ ಸ್ವದೇಶದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಭಾರತ ವಿಶ್ವಕಪ್‌ಗೆ ತಂಡ ಆಯ್ಕೆ ಮಾಡುವತ್ತ ಹೆಚ್ಚು ಗಮನ ನೀಡಿದೆ. ಕೈಯಲ್ಲಿರುವ ಸರಣಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಆಟಗಾರರ ಕೆಲಸದ ಭಾರವನ್ನು ನಿಭಾಯಿಸುವುದು ಹಾಗೂ ತಂಡದ ಶಕ್ತಿಯನ್ನು ಪರೀಕ್ಷಿಸುವತ್ತ ಹೆಚ್ಚು ಗಮನ ಹರಿಸಲಾಗಿದೆ. ಹೀಗಾಗಿ ಇತರರಿಗೆ ಅವಕಾಶ ಮಾಡಿಕೊಡಲು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ಪರಿಣಾಮವಾಗಿ ಭಾರತ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಝಿಲೆಂಡ್‌ನ್ನು ಮಣಿಸಿತು. ಆದರೆ, ಆಸ್ಟ್ರೇಲಿಯ ವಿರುದ್ಧ್ದ ಟಿ-20 ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿದೆ.

ಭಾರತ ತಂಡ ವಿಶ್ವಕಪ್ ಆರಂಭಕ್ಕೆ ಮೊದಲು ಬುಧವಾರ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದೆ. ಸರಣಿಯಲ್ಲಿ 0-2ರಿಂದ ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯ 3-2 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಭಾರತ ಐದು ಅಥವಾ 6 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಬಳಿಕ ಎರಡು ಬಾರಿ ಸರಣಿ ಸೋತ ಮೊದಲ ತಂಡವೆಂಬ ಅಪಖ್ಯಾತಿಗೆ ಒಳಗಾಯಿತು. ಭಾರತ ಎದುರಿಸುತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯೇ? ಸರಣಿ ಆರಂಭಕ್ಕೆ ಮೊದಲು ಭಾರತ ಎದುರಿಸುತ್ತಿದ್ದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಅವುಗಳೆಂದರೆ...

► ನಾಲ್ಕನೇ ಕ್ರಮಾಂಕಕ್ಕೆ ಯಾರು ಯೋಗ್ಯರು?

ಕಳೆದ 2 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಯಾರು ಯೋಗ್ಯರು ಎಂಬ ಪ್ರಶ್ನೆ ಕಾಡುತ್ತಿದೆ. ಐಪಿಎಲ್ 2018ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಂಬಟಿ ರಾಯುಡು ಏಶ್ಯ ಕಪ್ ಬಳಿಕ 4ನೇ ಕ್ರಮಾಂಕದಲ್ಲಿ 12 ಪಂದ್ಯಗಳಲ್ಲಿ ಆಡಿದ್ದು 53.87ರ ಸರಾಸರಿಯಲ್ಲಿ ಒಟ್ಟು 431 ರನ್ ಗಳಿಸಿದ್ದರು.

ನ್ಯೂಝಿಲೆಂಡ್‌ನಲ್ಲಿ 5 ಇನಿಂಗ್ಸ್ ಗಳಲ್ಲಿ 160 ರನ್ ಗಳಿಸಿದ್ದರು. ಆದರೆ, ಬುಧವಾರ ಕೊನೆಗೊಂಡ ಏಕದಿನ ಸರಣಿಯಲ್ಲಿ ಮೊದಲ 3 ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಕೇವಲ 33 ರನ್ ಗಳಿಸಿದ್ದರು. ಕೊನೆಯ 2 ಪಂದ್ಯಗಳಿಂದ ಹೊರಗುಳಿದಿದ್ದರು. 4ನೇ ಪಂದ್ಯದಲ್ಲಿ ಕೊಹ್ಲಿ, 5ನೇ ಪಂದ್ಯದಲ್ಲಿ ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಆಡಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ರಾಯುಡು ಮೇಲೆ ವಿಶ್ವಾಸ ಕಡಿಮೆಯಾಗಿದೆಯೇ?ಎಂಎಸ್ ಧೋನಿ ಭಡ್ತಿ ಪಡೆಯುತ್ತಾರೆಯೇ?ಎಂಬ ಪ್ರಶ್ನೆ ಕಾಡುತ್ತಿದೆ.

► 3ನೇ ಆಯ್ಕೆಯ ಆರಂಭಿಕ ಆಟಗಾರ ಯಾರು?

ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊಹಾಲಿಯಲ್ಲಿ ನಡೆದ 4ನೇ ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ಜೊತೆಯಾಟ ನಡೆಸಿ ಭಾರತದ 2ನೇ ಯಶಸ್ವಿ ಜೋಡಿ ಎನಿಸಿಕೊಂಡಿದ್ದರು. ಧವನ್ ಮೊಹಾಲಿಯಲ್ಲಿ ಶತಕ ಸಿಡಿಸಿ ಫಾರ್ಮ್ ಗೆ ಮರಳಿದ್ದರೂ ಮೀಸಲು ಆರಂಭಿಕ ಆಟಗಾರ ಯಾರೆಂಬ ಪ್ರಶ್ನೆ ಉದ್ಭವಿಸಿದೆ. ರಾಹುಲ್-ರಾಯುಡು ಸೆಪ್ಟಂಬರ್‌ನಲ್ಲಿ ಅಫ್ಘಾನ್ ವಿರುದ್ಧ ಇನಿಂಗ್ಸ್ ಆರಂಭಿಸಿದ್ದರು. 2017ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಅಜಿಂಕ್ಯ ರಹಾನೆ-ರೋಹಿತ್ ಆರಂಭಿಕ ಆಟಗಾರರಾಗಿದ್ದರು. ರಹಾನೆ ಈಗ ಏಕದಿನ ಕ್ರಿಕೆಟ್‌ನಲ್ಲಿಲ್ಲ. ಭಾರತ ವಿಶ್ವಕಪ್‌ನಲ್ಲಿ ರೋಹಿತ್-ಧವನ್‌ರನ್ನೇ ಅವಲಂಬಿಸುವ ಸಾಧ್ಯತೆಯಿದೆ.

► ಧೋನಿ ಬಳಿಕ ದ್ವಿತೀಯ ವಿಕೆಟ್‌ಕೀಪರ್ ಯಾರು?

ಎಂ.ಎಸ್. ಧೋನಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. 4ನೇ ಹಾಗೂ 5ನೇ ಪಂದ್ಯದಲ್ಲಿ ಧೋನಿ ಅನುಪಸ್ಥಿತಿ ತಂಡವನ್ನು ಇನ್ನಿಲ್ಲದಂತೆ ಕಾಡಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದಲ್ಲಿ ಮಿಂಚಿದ್ದ ರಿಷಭ್ ಪಂತ್ 2ನೇ ವಿಕೆಟ್‌ಕೀಪರ್ ಆಗುವ ಭರವಸೆ ಮೂಡಿಸಿದ್ದರು. ಪಂತ್‌ಗೆ ಮೊಹಾಲಿ ಹಾಗೂ ದಿಲ್ಲಿಯಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಮೊಹಾಲಿಯಲ್ಲಿ 36 ರನ್ ಗಳಿಸಿದ್ದ ಪಂತ್ ವಿಕೆಟ್‌ಕೀಪಿಂಗ್‌ನಲ್ಲಿ ತೀವ್ರ ನಿರಾಸೆಗೊಳಿಸಿ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು. ತವರು ಪಟ್ಟಣ ದಿಲ್ಲಿಯಲ್ಲಿ ನಡೆದ 5ನೇ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. 33ರ ವರ್ಷದ ಕಾರ್ತಿಕ್ 2ನೇ ವಿಕೆಟ್‌ಕೀಪರ್‌ಗೆ ಉತ್ತಮ ಆಯ್ಕೆ. ಆದರೆ, ಆಸೀಸ್ ವಿರುದ್ದದ ಸರಣಿಯಿಂದ ಅವರನ್ನು ಕೈಬಿಟ್ಟಿರುವ ಕಾರಣ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ.

► ಭಾರತ ಮೂವರು ಸ್ಪಿನ್ನರ್‌ಗಳನ್ನು ಆಡಿಸುವುದೇ?

ಅವಳಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಭಾರತದ ಪರ ಕಳೆದ 10 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಭಾರತ ಆ ಮೂರು ಪಂದ್ಯವನ್ನು ಸೋತಿತ್ತು. ರವೀಂದ್ರ ಜಡೇಜ ಆಸೀಸ್ ವಿರುದ್ಧ 5 ಪಂದ್ಯಗಳಲ್ಲಿ 4ರಲ್ಲಿ ಆಡಿದ್ದಾರೆ. ಚಹಾಲ್ ಮೊಹಾಲಿ ಪಂದ್ಯದಲ್ಲಿ 80 ರನ್ ನೀಡಿ ದುಬಾರಿಯಾಗಿದ್ದರು. ಜಡೇಜ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. ಯಾದವ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಉಳಿದಿದೆ.

► ವಿಜಯ ಶಂಕರ್ ಪ್ರದರ್ಶನ ತೃಪ್ತಿದಾಯಕವೇ?

ಹಾರ್ದಿಕ್ ಪಾಂಡ್ಯರಿಂದ ತೆರವಾದ ಸ್ಥಾನ ತುಂಬಿದ್ದ ವಿಜಯ ಶಂಕರ್ ಆಸೀಸ್ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದರು. ನಾಗ್ಪುರದಲ್ಲಿ 46 ರನ್ ಗಳಿಸಿದ್ದ ಶಂಕರ್ ರಾಂಚಿಯಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗಲು ಯತ್ನಿಸಿದ್ದರು. ನಾಗ್ಪುರದಲ್ಲಿ 5ನೇ, ರಾಂಚಿ, ಮೊಹಾಲಿಯಲ್ಲಿ 7ನೇ ಹಾಗೂ ದಿಲ್ಲಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶಂಕರ್ ಪ್ರದರ್ಶನ ಪಾಂಡ್ಯ ಸ್ಥಾನ ತುಂಬುವಷ್ಟು ಸಮರ್ಥವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News