ಶ್ರೀಶಾಂತ್ ವಿರುದ್ಧ ಆಜೀವ ನಿಷೇಧ ಹಿಂಪಡೆದ ಸುಪ್ರೀಂಕೋರ್ಟ್

Update: 2019-03-15 06:08 GMT

ಹೊಸದಿಲ್ಲಿ, ಮಾ.15: ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್‌ಗೆ ವಿಧಿಸಲಾಗಿರುವ ಆಜೀವ ನಿಷೇಧವನ್ನು ಹಿಂಪಡೆದಿರುವ ಸುಪ್ರೀಂಕೋರ್ಟ್, ಶಿಕ್ಷೆಯ ಪ್ರಮಾಣ ಮರು ಪರಿಶೀಲನೆ ನಡೆಸುವಂತೆ ಬಿಸಿಸಿಐಗೆ ಆದೇಶ ನೀಡಿದೆ.

2013ರಲ್ಲಿ ಕೇರಳ ಕ್ರಿಕೆಟಿಗನ ಮೇಲೆ ಬಿಸಿಸಿಐ ಶಿಸ್ತು ಸಮಿತಿ ವಿಧಿಸಿರುವ ಆಜೀವ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯ ಹಿಂದಕ್ಕೆ ಪಡೆದಿದೆ.

 ಇನ್ನು ಮೂರು ತಿಂಗಳೊಳಗೆ ಶ್ರೀಶಾಂತ್‌ಗೆ ಶಿಕ್ಷೆಯ ಪ್ರಮಾಣದ ಬಗ್ಗೆ ಮರು ಪರಿಶೀಲನೆ ನಡೆಸಬೇಕೆಂದು ಬಿಸಿಸಿಐನ ಶಿಸ್ತುಸಮಿತಿಗೆ ಜಸ್ಟಿಸ್ ಅಶೋಕ್ ಭೂಷಣ್ ಹಾಗೂ ಕೆ.ಎಂ.ಜೋಸೆಫ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಆದೇಶಿಸಿದೆ. ತನ್ನ ತೀರ್ಪು ಶ್ರೀಶಾಂತ್ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕ್ರಿಮಿನಲ್ ವ್ಯಾಜ್ಯದ ಮೇಲೆ ಯಾವುದೇ ಪರಿಣಾಮಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಶ್ರೀಶಾಂತ್ ಹಾಗೂ ಇತರ ಕ್ರಿಕೆಟಿಗರನ್ನು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ದೋಷ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇಂದಿನ ತೀರ್ಪುನಿಂದಾಗಿ ಕೇರಳದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಮತ್ತೊಮ್ಮೆ ಬಿಸಿಸಿಐ ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಅವಕಾಶ ಪಡೆದಿದ್ದಾರೆ.

2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶ್ರೀಶಾಂತ್ ಆಜೀವ ನಿಷೇಧ ಎದುರಿಸುತ್ತಿದ್ದರು. ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಬಿಸಿಸಿಐ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಶ್ರೀಶಾಂತ್ ಸುಪ್ರೀಂಕೋರ್ಟಿನ ಕದ ತಟ್ಟಿದ್ದರು. ಶ್ರೀಶಾಂತ್ ಅರ್ಜಿ ವಿಚಾರಣೆ ನಡೆಸಿದ ಪೀಠ ಆಜೀವ ನಿಷೇಧವನ್ನು ಹಿಂಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News