ಪೆಟ್ರೋಲ್ ಪಂಪ್‌ಗಳಲ್ಲಿ ಪ್ರಧಾನಿ ಜಾಹೀರಾತು ಫಲಕ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2019-03-15 12:38 GMT

ಹೊಸದಿಲ್ಲಿ, ಮಾ.15: ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯ ಬೃಹತ್ ಜಾಹೀರಾತು ಫಲಕಗಳನ್ನು ಪೆಟ್ರೋಲ್ ಪಂಪ್, ರೈಲ್ವೇ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಳವಡಿಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸರಕಾರವು ಪ್ರಧಾನಿ ಮೋದಿಯ ಜಾಹೀರಾತು ಫಲಕವನ್ನು ಅಳವಡಿಸಿರುವ ಬಗ್ಗೆ ಮಾರ್ಚ್ 10ರಂದು ಕಾಂಗ್ರೆಸ್ ಮುಖಂಡ ಆರ್‌ಪಿಎನ್ ಸಿಂಗ್ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯಿಂದ ಸಂಗ್ರಹಿಸಲಾದ ಹಣವನ್ನು ಈ ರೀತಿಯ ಜಾಹೀರಾತು ಫಲಕ ಅಳವಡಿಸಲು ದುಂದು ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ದೂರನ್ನು ಪರಿಗಣಿಸಿರುವ ಆಯೋಗವು ಜಾಹೀರಾತು ಫಲಕವನ್ನು ತೆರವುಗೊಳಿಸುವಂತೆ ಸೂಚಿಸಿದೆ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರ ಮುಖಂಡರ ಬಗ್ಗೆ ಬಿಜೆಪಿ ಸಚಿವರು ಮಾಡುತ್ತಿರುವ ಅಸಭ್ಯ ಟೀಕೆಗಳ ಕುರಿತೂ ಆಯೋಗಕ್ಕೆ ದೂರು ನೀಡಲಾಗಿದೆ. ಅಸಭ್ಯ ಟೀಕೆ ಮಾಡುತ್ತಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿಗೊಳಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮನವಿ ಮಾಡಿದೆ . ಇದಕ್ಕೆ ಸಂಬಂಧಿಸಿದ ವೀಡಿಯೊ ದೃಶ್ಯಗಳನ್ನು ಸಲ್ಲಿಸುವಂತೆ ಆಯೋಗ ತಿಳಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಧಾರರಹಿತ ಆರೋಪ ಹೊರಿಸುತ್ತಿದ್ದಾರೆ ಎಂದು ಬುಧವಾರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಮಂಗಳವಾರ ಗುಜರಾತ್‌ನಲ್ಲಿ ನಡೆದಿದ್ದ ಜನಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಭಾರತೀಯ ವಾಯುಪಡೆಯಿಂದ 30 ಸಾವಿರ ಕೋಟಿ ರೂ. ಹಣವನ್ನು ಕದ್ದು ಅದನ್ನು ಉದ್ಯಮಿ ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News