ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಟಿಡಿಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Update: 2019-03-15 14:04 GMT

ಹೈದರಾಬಾದ್,ಮಾ.15: ಮುಂದಿನ ತಿಂಗಳು ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ 126 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯು ಬಿಡುಗಡೆಗೊಳಿಸಿದೆ. ಆಂಧ್ರ ಪ್ರದೇಶವಲ್ಲದೆ ಅರುಣಾಚಲ ಪ್ರದೇಶ,ಒಡಿಶಾ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳೂ ಲೋಕಸಭಾ ಚುನಾವಣೆಯೊಂದಿಗೇ ನಡೆಯಲಿವೆ.

ತನ್ನ ಪಕ್ಷವು 175 ಸದಸ್ಯ ಬಲದ ವಿಧಾನಸಭೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ‘ಮಿಷನ್ 150 ಪ್ಲಸ್’ ಗುರಿಯನ್ನು ಹೊಂದಿದೆ ಎಂದು ಚಿತ್ತೂರು ಜಿಲ್ಲೆಯ ಕುಪ್ಪಂ ಕ್ಷೇತ್ರದಲ್ಲಿ ಪುನರಾಯ್ಕೆಯನ್ನು ಬಯಸಿ ಕಣಕ್ಕಿಳಿಯಲಿರುವ ರಾಜ್ಯದ ಮುಖ್ಯಮಂತ್ರಿ ಹಾಗು ಟಿಡಿಪಿ ವರಿಷ್ಠ ಎನ್.ಚಂದ್ರಬಾಬು ನಾಯ್ಡು ತಿಳಿಸಿದರು.

ಪಕ್ಷದ ಚುನಾವಣಾ ಪ್ರಚಾರ ಗೀತೆಯನ್ನೂ ಬಿಡುಗಡೆಗೊಳಿಸಿದ ಅವರು,ಮಾ.16ರಂದು ಶ್ರೀಕಾಕುಳಂ ಜಿಲ್ಲೆಯಿಂದ ಚುನಾವಣಾ ಪ್ರಚಾರವನ್ನು ಆರಂಭಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಅವರು ಪಟ್ಟಿಯಲ್ಲಿರುವ ಪ್ರಮುಖರಲ್ಲಿ ಸೇರಿದ್ದು, ಅಮರಾವತಿಯ ಮಂಗಳಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಇದೇ ಮೊದಲ ಬಾರಿಗೆ ನೇರ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.

ನಾಯ್ಡು ಅವರ ಭಾವ ಹಾಗೂ ಲೋಕೇಶ ಅವರ ಮಾವ ನಟ ಬಾಲಕೃಷ್ಣ ಅವರು ಹಿಂದುಪುರದಿಂದ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಸಚಿವರಾದ ವೈ.ರಾಮಕೃಷ್ಣುಡು,ಗಂಟಾ ಶ್ರೀನಿವಾಸ ರಾವ್ ಮತ್ತು ಭುಮಾ ಅಖಿಲಾ ಪ್ರಿಯಾ ಅವರೂ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗಾಗಿ ಎ.11ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆಂಧ್ರಪ್ರದೇಶವು 25 ಲೋಕಸಭಾ ಸ್ಥಾನಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News