ತನಿಖಾ ಪತ್ರಿಕೋದ್ಯಮವೂ ಒಎಸ್‌ಎ ಎಂಬ ಗುಮ್ಮನೂ...

Update: 2019-03-16 18:32 GMT

ದಾಖಲೆಗಳಲ್ಲಿ ರಾಷ್ಟ್ರದ ಭದ್ರತೆ ರಹಸ್ಯಗಳು ಏನೂ ಇಲ್ಲ. ರಫೇಲ್ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಸಕಾರದಿಂದ ಆಗಿರಬಹುದಾದ ಲೋಪದೋಷಗಳನ್ನು ಮಾತ್ರ ಅವು ಬಹಿರಂಗ ಪಡಿಸಿವೆ. ಇಲ್ಲಿ ನಿಜವಾಗಿ ಭದ್ರತೆಯ ಆತಂಕ ತಲೆದೋರುವುದು, ರಕ್ಷಣಾ ಉಪಕರಣಗಳ ಖರೀದಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜೋಪಾನವಾಗಿರಿಸುವುದರಲ್ಲೂ ಸರಕಾರ ಅಸಮರ್ಥವಾಗಿದೆ ಎಂಬುದನ್ನು ಗಮನಿಸಿದಾಗ. ಈ ದಾಖಲೆಗಳು ಶತ್ರುಗಳ ಕೈಗೆ ಸಿಕ್ಕರೆ ಏನಾಗಬಹುದು?


ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವುದು ಒಂದು ನಾಣ್ನುಡಿ. ಚುನಾವಣಾಪೂರ್ವ ನರೇಂದ್ರ ಮೋದಿ ಸರಕಾರದ ಕೆಲವು ಕ್ರಮಗಳನ್ನು ಗಮನಿಸಿದಾಗ ಇದು ನೆನಪಿಗೆ ಬಂತು. ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಕೆಲವು ರಹಸ್ಯ ದಾಖಲೆಗಳು ಕಳವಾಗಿದೆಯೆಂದು ಸುಪ್ರೀಂ ಕೋರ್ಟಿನ ಮುಂದೆ ನಿವೇದಿಸಿಕೊಂಡದ್ದು ಹಾಗೂ ರಫೇಲ್ ವಿಚಾರಣೆ ಸಂದರ್ಭದಲ್ಲಿ ಕಳವಾದ ದಾಖಲೆಗಳನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಮನವಿ ಮಾಡಿಕೊಂಡಿರುವುದು ಮೋದಿ ಸರಕಾರದ ಅತಿಬುದ್ಧಿವಂತಿಕೆಯ ಇತ್ತೀಚಿನ ನಿದರ್ಶನ. ಸಾರ್ವಜನಿಕ ರಂಗದ ಗಮನಕ್ಕೆ ಬಂದಿರುವ ರಫೇಲ್ ಖರೀದಿಗೆ ಸಂಬಂಧಿಸಿದ ದಾಖಲೆಗಳು ಸರಕಾರದಿಂದ ಕಳವಾದ ದಾಖಲೆಗಳಾದ್ದರಿಂದ ಈ ಸಂಬಂಧಿತ ಅರ್ಜಿಗಳನ್ನು ವಜಾಮಾಡ ಬೇಕೆಂದೂ ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್ ವಾದ ಮಂಡಿಸಿದರು. ಅಪರಾಧ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮೊಕದ್ದಮೆಗಳಲ್ಲಿ ಸಾಕ್ಷಿಪುರಾವೆಯಾಗಿ ಮಂಡಿಸಲಾದ ದಾಖಲೆಗಳನ್ನು ಅವುಗಳು ‘ಕಳವಾದವು’ ಎಂಬ ಕಾರಣದಿಂದ ಪರಿಗಣಿಸದೇ ಇರಲು ಸಾಧ್ಯವೇ? ಕಳವಾದ ದಾಖಲೆಗಳನ್ನು ನ್ಯಾಯಾಲಯ ಸಾಕ್ಷ್ಯವಾಗಿ ಪರಿಗಣಿಸುವುದನ್ನು ನಿಷೇಧಿಸುವ ಕಾನೂನು ದೇಶದಲ್ಲಿ ಇಲ್ಲ. ಇಂಥ ಮೊಕದ್ದಮೆಗಳಲ್ಲಿ ಸರಕಾರ ರಾಷ್ಟ್ರದ ಭದ್ರತೆ ಮತ್ತು ಗೋಪ್ಯತೆಯಡಿ ಆಶ್ರಯಪಡೆದುಕೊಂಡು ಪಾರಾಗಲು ಪ್ರಯತ್ನಿಸುವುದು ಎಷ್ಟರಮಟ್ಟಿಗೆ ಔಚಿತ್ಯಪೂರ್ಣವಾದೀತು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ ಸರಕಾರ ಪೆಚ್ಚಾಯಿತು.

ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ದಾಖಲೆಗಳೇ ರಕ್ಷಣಾ ಸಚಿವಾಲಯದಿಂದ ಕಳವಾಗುತ್ತದೆ ಎಂದಾದಲ್ಲಿ ಈ ಸಕಾರದಿಂದ ದೇಶದ ರಕ್ಷಣೆ ಹೇಗೆ ಸಾಧ್ಯವಾದೀತು? ವಿರೋಧ ಪಕ್ಷಗಳು ಹೀಗೆ ತರಾಟೆಗೆ ತೆಗೆದು ಕೊಂಡಾಗ ಸರಕಾರ ಮುಖಭಂಗವನ್ನೇ ಎದುರಿಸಬೇಕಾಯಿತು. ಎಂದೇ ಮರುದಿನ ದಾಖಲೆಪತ್ರಗಳು ಕಳವಾಗಿಲ್ಲ ಅವುಗಳನ್ನು ಜೆರಾಕ್ಸ್ ಕಾಪಿ ಮಾಡಿ ಒಯ್ದಿದ್ದಾರೆ ಎಂದು ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಕಳವಾದ ದಾಖಲೆ’ಗಳನ್ನು ಪ್ರಕಟಿಸಿದ ಎರಡು ಪತ್ರಿಕೆಗಳ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅನ್ವಯ ಕ್ರಮ ಜರುಗಿಸುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿತು.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸರಕಾರದ ನಡೆ ಮೊದಲಿನಿಂದಲೂ ಶಂಕಾಸ್ಪದವಾದುದು. ‘ರಾಷ್ಟ್ರ ಸುಭದ್ರತೆಯ’ ಗುರಾಣಿಯನ್ನು ಮುಂದಿಟ್ಟುಕೊಡು ಸರಕಾರ ಮೊದಲಿನಿಂದಲೂ ನೈಜ ಸಂಗತಿಗಳನ್ನು ಜನತೆಯ ಮುಂದೆ ಇಡುತ್ತಿಲ್ಲ. ಸಂಸತ್ತಿನ ಜಂಟಿ ಸಮಿತಿಯ ತನಿಖೆಗೂ ಒಪ್ಪುತ್ತಿಲ್ಲ. ಆದರೆ ರಕ್ಷಣಾ ಸಾಮಗ್ರಿಗಳ ಖರೀದಿಗಳಿಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಬಹಿರಂಗ ಪಡಿಸುವುದು ಭದ್ರತೆಯ ದೃಷ್ಟಿಯಿಂದ ಯಾವುದೇ ಸರಕಾರಕ್ಕೂ ಕಷ್ಟಸಾಧ್ಯವೆಂಬ ಅಭಿಮತ ಸರಕಾರಕ್ಕೆ ರಕ್ಷೆಯಾಗಿತ್ತು. ಈ ಸಂಬಂಧದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ ಸಹ ಇದೇ ನಿಲುವು ತಾಳಿತ್ತು. ಇದು, ಮುಳುಗುವವನಿಗೆ ಹುಲ್ಲು ಕಡ್ಡಿಯ ಆಶ್ರಯ ಸಿಕ್ಕಂತೆ ಸರಕಾರದ ನೆರವಿಗೆ ಬಂದಿತು. ಇದನ್ನು ಸರಕಾರ ತನ್ನ ವಿಜಯವೆಂದೇ ಭಾವಿಸಿತು.

ಸರ್ವೋಚ್ಚ ನ್ಯಾಯಾಲಯವೇ ತನ್ನ ಪರ ತೀರ್ಪು ನೀಡಿರುವಾಗ ತಾನು ಮತ್ತಾರಿಗೂ ಉತ್ತರದಾಯಿಯಲ್ಲ ಎಂಬಂತೆ ವರ್ತಿಸತೊಡಗಿತು. ಆದರೆ ದಿನಗಳು ಉರುಳಿದಂತೆ ವಿಮಾನ ಖರೀದಿಯ ವ್ಯವಹಾರದಲ್ಲಿ ಪ್ರಧಾನ ಮಂತ್ರಿಯವರ ಕಚೇರಿಯ ಮಧ್ಯಪ್ರವೇಶವೂ ಸೇರಿದಂತೆ ಅನೇಕ ವಿವರಗಳು ಹೊರಬಂದವು. ರಕ್ಷಣಾ ಸಚಿವರ ಟಿಪ್ಪಣಿ ಸಹ ಪ್ರಧಾನ ಮಂತ್ರಿ ಕಚೇರಿಯ ಮಧ್ಯಪ್ರವೇಶವನ್ನು ಅಲ್ಲಗಳೆದಿಲ್ಲ. ಆದರೆ ‘ದಿ ಹಿಂದೂ’ ಪತ್ರಿಕೆಯ ತನಿಖಾ ವರದಿಗಳು, ವಿಮಾನದ ಬೆಲೆ, ಬ್ಯಾಂಕ್ ಖಾತರಿ, ಪ್ರಧಾನ ಮಂತ್ರಿ ಕಚೇರಿಯ ಹಸ್ತಕ್ಷೇಪ, ಫ್ರಾನ್ಸ್ ಸರಕಾರದ ಖಾತರಿಗಳಿಗೆ ಸಂಬಂಧಿಸಿದ ದಾಖಲೆಗಳ್ನು ಪ್ರಕಟಿಸುವುದರ ಜೊತೆಗೆ ಈ ವಿಷಯಗಳಲ್ಲಿ ಕೇಂದ್ರ ಸರಕಾರ ಸತ್ಯ ಸಂಗತಿಗಳನ್ನು ಮರೆಮಾಚುತ್ತಿದೆ ಎಂಬಿತ್ಯಾದಿಗಳನ್ನು ಬಹಿರಂಗ ಪಡಿಸಿದವು. ಇದಕ್ಕೂ ಮುನ್ನ, ತನ್ನ ಪ್ರಮಾಣಪತ್ರದಲ್ಲಿನ ಇಂಗ್ಲಿಷನ್ನು ನ್ಯಾಯಾಲಯ ವ್ಯಾಕರಣಬದ್ಧವಾಗಿ ಓದಿಕೊಂಡಿಲ್ಲ ಎಂದು ನ್ಯಾಯಾಲಯದ ಮೇಲೇ ಗೂಬೆ ಕೂರಿಸುವ ಪ್ರಯತ್ನವನ್ನೂ ಮೋದಿ ಸರಕಾರ ಮಾಡಿತ್ತು. ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದಾಗ ಬರಬಹುದಾದ ತೀರ್ಪಿನಿಂದ ಆಗಬಹುದಾದ ಮುಜುಗರದಿಂದ ತನ್ನನ್ನು ರಕ್ಷಿಸಿಕೊಳ್ಳಲೋ ಎಂಬಂತೆ ಸರಕಾರ ‘ಕಳವಿನ’ ನಾಟಕವಾಡಿತು. ದಾಖಲೆಗಳು ಬಹಿರಂಗಗೊಂಡು ಒಂದು ತಿಂಗಳು ಕಳೆದರೂ ‘ಕಳವಿನ’ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆ ಮತ್ತಷ್ಟು ಮುಜುಗರ ಉಂಟುಮಾಡಿತು.

ನ್ಯಾಯಾಲಯದ ಪ್ರಶ್ನೆಗಳು ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸುವಂತಿದ್ದವು. ಭ್ರಷ್ಟಾಚಾರದಂಥ ಗುರುತರ ಆರೋಪ ಬಂದಾಗ ಸರಕಾರ ದೇಶದ ಸುಭದ್ರತೆ ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ ರಕ್ಷಣೆ ಪಡೆಯಬಹುದೇ? ಕಳುವಾದ ದಾಖಲೆಗಳು ಸಾಕ್ಷ್ಯವಾಗಲಾರವು ಎಂದು ತಿರಸ್ಕರಿಸಬಹುದೇ? ಎರಡೂ ಪ್ರಶ್ನೆಗಳನ್ನು ಸರಕಾರಕ್ಕೆ ಕೇಳಿದ ನ್ಯಾಯಾಲಯವೇ ಹಾಗೆ ಮಾಡುವಂತಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿತು. ದಾಖಲೆಗಳಲ್ಲಿ ರಾಷ್ಟ್ರದ ಭದ್ರತೆ ರಹಸ್ಯಗಳು ಏನೂ ಇಲ್ಲ. ರಫೇಲ್ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಸರಕಾರದಿಂದ ಆಗಿರಬಹುದಾದ ಲೋಪದೋಷಗಳನ್ನು ಮಾತ್ರ ಅವು ಬಹಿರಂಗ ಪಡಿಸಿವೆ. ಇಲ್ಲಿ ನಿಜವಾಗಿ ಭದ್ರತೆಯ ಆತಂಕ ತಲೆದೋರುವುದು, ರಕ್ಷಣಾ ಉಪಕರಣಗಳ ಖರೀದಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜೋಪಾನವಾಗಿರಿಸುವುದರಲ್ಲೂ ಸರಕಾರ ಅಸಮರ್ಥವಾಗಿದೆ ಎಂಬುದನ್ನು ಗಮನಿಸಿದಾಗ. ಈ ದಾಖಲೆಗಳು ಶತ್ರುಗಳ ಕೈಗೆ ಸಿಕ್ಕರೆ ಏನಾಗಬಹುದು?
ಕದ್ದು ತಂದವು ಎನ್ನಲಾದ ದಾಖಲೆಗಳನ್ನು ಸಾಕ್ಷಿಪುರಾವೆಯಾಗಿ ಪರಿಗಣಿಸಬಾರದು ಎಂದು ದೇಶದ ಯಾವ ಕಾನೂನಿನಲ್ಲೂ ಹೇಳಿಲ್ಲ.

2ಜಿ ಸ್ಪೆಕ್ಟ್ರಂ, ಕಲ್ಲಿದಲುಗಣಿ ಹಂಚಿಕೆ, ಬೋಫೋರ್ಸ್ ಮೊದಲಾದ ಹಗರಣಗಳಲ್ಲಿ ಇಂಥ ಸಾಕ್ಷಿಪುರಾವೆಗಳನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಡಿರುವ ಪೂರ್ವ ನಿದರ್ಶನಗಳಿವೆ. ದಾಖಲೆಗಳನ್ನು ಬಹಿರಂಗ ಪಡಿಸಿದ್ದಕ್ಕಾಗಿ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸುವ ಮಾತನ್ನೂ ನ್ಯಾಯಾಲಯ ಒಪ್ಪಿಕೊಂಡಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಇಂಥ ದಾಖಲೆಗಳನ್ನು ದೇಶವಿದೇಶಗಳ ಪತ್ರಿಕೆಗಳು ತನಿಖಾ ವರದಿಯಾಗಿ ಪ್ರಕಟಸಿರುವ ನಿದರ್ಶನಗಳೂ ಹಲವಾರಿವೆ. ಇದಕ್ಕೆ ಉದಾಹರಣೆಯಾಗಿ ಪೆಂಟಗನ್ ಪೇಪರ್ಸ್‌, ವಿಕಿಲೀಕ್ಸ್, ಬೊಫೋರ್ಸ್ ಹಗರಣ ಮೊದಲಾದ ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ರಫೇಲ್ ವಿಮಾನಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗ ಪಡಿಸಿರುವ ‘ದಿ ಹಿಂದೂ’ ಪತ್ರಿಕೆ ಮತ್ತು ಇತರ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ ಸರಕಾರದ ನಿರ್ಧಾರದಿಂದ ಪತ್ರಿಕಾ ಸ್ವಾತಂತ್ರ್ಯ ಮತ್ತು ಸತ್ಯಸಂಗತಿ ತಿಳಿಯುವ ಪ್ರಜೆಗಳ ಹಕ್ಕಿಗೆ ಚ್ಯುತಿಯಾಗಲಿದೆ. ಅಫಿಶಿಯಲ್ ಸಿಕ್ರೆಟ್ಸ್ ಆ್ಯಕ್ಟ್‌ನ(ಒಎಸ್‌ಎ) ಅನ್ವಯ ಕ್ರಮ ಜರುಗಿಸುವುದಾಗಿ ಸರಕಾರ ಹೇಳಿದೆ.

ಏನಿದು ಈ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್?

ಎಸ್‌ಎ -ವಸಾಹತು ಆಳ್ವಿಕೆಯ ಒಂದು ಪಳೆಯುಳಿಕೆ ಕಾಯ್ದೆ. ಬ್ರಿಟಿಷರು ಈ ಕಾನೂನಿನ ಸೃಷ್ಟಿಕರ್ತರು. ನಂತರ ಅವರು ಇದನ್ನು ಕಾಮನ್ವೆಲ್ತ್ ರಾಷ್ಟ್ರಗಳಿಗೆ ವಿಸ್ತರಿಸಿದರು. ರಾಷ್ಟ್ರದ ವಿದ್ಯಮಾನಗಳು, ರಾಜತಾಂತ್ರಜ್ಞತೆ, ದೂತವಾಸ, ರಾಷ್ಟ್ರ ಭದ್ರತೆ, ಗೂಢಚಾರಿಕೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಗೋಪ್ಯವಾಗಿರಿಸಬೇಕು; ಕಾನೂನಿನ್ವಯ ಯಾರೊಬ್ಬರೂ ನಿಷೇಧಿತ ಪ್ರದೇಶಗಳಲ್ಲಿ ಓಡಾಡುವಂತಿಲ್ಲ, ಅಲ್ಲಿನ ಮಾಹಿತಿಗಳನ್ನು ಸಂಗ್ರಹಿಸುವಂತಿಲ್ಲ ಎನ್ನುತ್ತದೆ ಒಎಸ್‌ಎ. ಇದನ್ನು ಉಲ್ಲಂಘಿಸಿದವರಿಗೆ ಹದಿನಾಲ್ಕು ವರ್ಷಗಳ ಸೆರೆಮನೆ ಶಿಕ್ಷೆ ವಿಧಿಸಬಹುದಾಗಿದೆ. ಈ ಕಾನೂನಿಲ್ಲಿ ತನಿಖಾ ಪತ್ರಿಕೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಳವಡಿಸಿರುವ ವಿಧಿಯೊಂದಿದೆ. ಈ ವಿಧಿಯನ್ವಯ ವಿಷಯ ಎಷ್ಟೇ ಸಾರ್ವಜನಿಕ ಮಹತ್ವದ್ದಾಗಿರಲಿ ಪತ್ರಿಕೆಗಳು ನಿಷಿದ್ಧ ಮಾಹಿತಿಯನ್ನು ಮತ್ತು ಸ್ಥಳಗಳನ್ನು ಕುರಿತು ವರದಿಮಾಡುವಂತಿಲ್ಲ. ಆದರೆ ನಮ್ಮ ಸಂಸತ್ತು ಅಂಗೀಕರಿಸಿರುವ ಮಾಹಿತಿ ಹಕ್ಕು ಶಾಸನ (ಆರ್‌ಟಿಐ) ಜಾರಿಗೆ ಬಂದ ನಂತರ ಒಎಸ್‌ಎ ಸ್ವಲ್ಪ ದುರ್ಬಲಗೊಂಡಿದೆ. ಮಾಹಿತಿ ಹಕ್ಕು ಶಾಸನದ 22ನೇ ವಿಭಾಗ (ಆರ್‌ಟಿಐ)ಒಎಸ್‌ಎ ಶಾಸನವನ್ನು ನಿಷ್ಕ್ರಿಯಗೊಳಿಸಿದೆ.

ಮಾಹಿತಿ ಹಕ್ಕು ಶಾಸನ ಬಂದ ಬಳಿಕ ದಾಖಲೆಗಳ ಗೌಪ್ಯತೆ ಪರಿಕಲ್ಪನೆ ಬದಲಾಗಿದೆ. ಆರ್‌ಟಿಐ ಕ್ರಾಂತಿಯುಂಟುಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹವಾದುದು. ಆರ್‌ಟಿಐ ಶಾಸನದ ಪ್ರಕಾರ, ಮಾಹಿತಿ ಕೇಳಿದವರಿಗೆ ಅದು ಗೋಪ್ಯ ಎಂಬ ನೆಪ ಒಡ್ಡಿ ನಿರಾಕರಿಸುವಂತಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಧಿಕೃತ ರಹಸ್ಯ (ಒಎಸ್‌ಎ) ಶಾಸನವನ್ನು ಅತಿ ವಿರಳವಾಗಿ ಬಳಸಲಾಗಿದೆ. 2009ರಲ್ಲಿ ಸಂಪುಟ ಸಭೆಯ ಕಾರ್ಯಕಲಾಪಗಳನ್ನು ಪ್ರಕಟಿಸಿದ್ದಕ್ಕಾಗಿ ಶಂತನು ಸೈಕಿಯಾ ಎಂಬ ಪತ್ರಕರ್ತರೊಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು. ‘ರಹಸ್ಯ’ ಎಂಬ ಹಣೆಪಟ್ಟಿ ಹಚ್ಚಿಕೊಂಡ ದಾಖಲೆಯೊಂದನ್ನು ಪ್ರಕಟಿಸಿದ್ದಕ್ಕಾಗಿ ಪತ್ರಕರ್ತರನ್ನು ಒಎಸ್‌ಎ ಅನ್ವಯ ಶಿಕ್ಷೆಗೆ ಗುರಿ ಪಡಿಸಲಾಗದೆಂದು ನ್ಯಾಯಾಲಯ ಸೈಕಿಯಾರನ್ನು ಬಂಧನಮುಕ್ತರನ್ನಾಗಿಸಿತ್ತು. ಸೈಕಿಯಾ ಅವರನ್ನು ಮತ್ತೆ 2015ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ವರದಿಗಳನ್ನು ಸೃಷ್ಟಿಸುವುದರಲ್ಲಿ ಹಾಗೂ ಸರಕಾರದ ವಶದಲ್ಲಿದ್ದ ಕಳವಾದ ದಾಖಲೆಗಳನ್ನು ವಿಶ್ಲೇಷಿಸುವುದರಲ್ಲಿ ಪೊಲೀಸರು ಒಳಗಾಗಿದ್ದಾರೆಂದು ಅವರನ್ನು ಬಂಧಿಸಿ ಖಟ್ಲೆ ಹೂಡಲಾಗಿತ್ತು. ಎಂಬತ್ತು ದಿನಗಳ ಸೆರೆವಾಸದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 2002ರಲ್ಲಿ ಇಫ್ತಿಕಾರ್ ಜೀಲಾನಿ ಎಂಬ ಪತ್ರಕರ್ತನನ್ನು ಒಎಸ್‌ಎ ಉಲ್ಲಂಘನೆ ಆರೋಪದ ಮೇಲೆ ಬಂಧಿಸಲಾಗಿತ್ತು. 2004ರಲ್ಲಿ ಸರಕಾರ ಮೊದ್ದಮೆಯನ್ನು ವಾಪಸ್ ತೆಗೆದುಕೊಂಡ ಕಾರಣ ಜೀಲಾನಿಯವರು ಸ್ವತಂತ್ರರಾದರು. ವಿಜ್ಞಾನಿ ನಂಬಿ ನಾರಾಯಣನ್ ಅವರ ವಿರುದ್ಧವೂ ಬೇಹುಗಾರಿಕೆ ಆರೋಪ ಮಾಡಿ ಈ ಕಾಯ್ದೆಯನ್ವಯ ಖಟ್ಲೆ ಹೂಡಲಾಗಿತ್ತು. ಆದರೆ ವಿಚಾರಣೆ ಕಾಲದಲ್ಲಿ ಸರಕಾರದಿಂದ ಆಪಾದನೆಯನ್ನು ಸಾಬೀತುಪಡಿಸಲಾಗಲಿಲ್ಲ.

ನಂಬಿ ನಾರಾಯಣನ್ ಅವರನ್ನು ಆಪಾದನೆಯಿಂದ ವಿಮುಕ್ತಿಗೊಳಿಸಿದ ಸುಪ್ರೀಂ ಕೋರ್ಟ್ ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶಿಸಿತು. ಹೀಗೆ ಸರಕಾರ ಒಎಸ್‌ಎ ಪ್ರಯೋಗಿಸಲು ಹೊರಟು ಕೈ ಸುಟ್ಟುಕೊಂಡಿರುವುದೇ ಹೆಚ್ಚು. ಓಬೀರಾಯನ ಕಾಲದ ಒಎಸ್‌ಎ ರದ್ದುಗೊಳಿಸಿ ಅದರ ಜಾಗದಲ್ಲಿ ರಾಷ್ಟ್ರೀಯ ಭದ್ರತಾ ಶಾಸನವನ್ನು ಜಾರಿಗೆ ತರುವಂತೆ ಹಲವಾರು ಸಲ ಕೆಲವರು ಆಗ್ರಹಪಡಿಸಿರುವುದುಂಟು. ಆದರೆ ಇಲ್ಲಿಯವರೆಗಿನ ಸರಕಾರ ಅದಕ್ಕೆ ಕಿವಿಗೊಟ್ಟಂತೆ ಕಾಣುತ್ತಿಲ್ಲ. ಸಾರ್ವಜನಿಕೆ ಹಿತದೃಷ್ಟಿಯಿಂದ ಇಂಥ ತನಿಖಾ ವರದಿಗಳನ್ನು ಪ್ರಕಟಿಸುವುದು ಪತ್ರಿಕೆಗಳ ಜನ್ಮಸಿದ್ಧಹಕ್ಕು ಹಾಗೂ ಸಂವಿಧಾನ ದತ್ತವಾದ ಸ್ವಾತಂತ್ರ್ಯ. ಇದನ್ನು ಸರಕಾರ ಪ್ರಶ್ನಿಸುವಂತಿಲ್ಲ. ಹಾಗೆಯೇ ತನಿಖಾ ವರದಿಯ ಮೂಲವನ್ನು ಬಹಿರಂಗಪಡಿಸುವಂತೆಯೂ ಆಗ್ರಹಪಡಿಸಲಾಗದು. ಸುದ್ದಿ ಮೂಲವನ್ನು ರಹಸ್ಯವಾಗಿರಿಸುವುದು ಹಾಗೂ ಈ ರಹಸ್ಯವನ್ನು ಕಾಪಾಡಿಕೊಳ್ಳುವುದು ಪತ್ರಿಕಾ ವೃತ್ತಿಯ ಧರ್ಮ. ಎಂದೇ, ‘‘ನಾವು ರಕ್ಷಣಾ ಸಚಿವಾಲಯದಿಂದ ದಾಖಲೆಗಳನ್ನು ಕದ್ದಿಲ್ಲ, ಅವುಗಳನ್ನು ಆಪ್ತ-ಗುಪ್ತ ಮೂಲಗಳಿಂದ ಪಡೆದುಕೊಂಡಿದ್ದೇವೆ. ದಾಖಲೆಗಳ ಮೂಲವನ್ನು ಬಹಿರಂಗ ಪಡಿಸುವಂತೆ ಭೂಮಿಯ ಮೇಲಣ ಯಾವ ಶಕ್ತಿಯಿಂದಲೂ ನಮ್ಮನ್ನು ಆಗ್ರಹಪಡಿಸಲಾಗದು. ನಾವು ಅವರಿಗೆ ವಚನಬದ್ಧರಾಗಿದ್ದೇವೆ’’ ಎಂದು ಹಿಂದೂ ಪತ್ರಿಕಾ ಬಳಗದ ಅಧ್ಯಕ್ಷರಾದ ರಾಮ್ ಅವರು ಹೇಳಿರುವುದು ವೃತ್ತಿ ನೀತಿ ಮತ್ತು ಪಾವಿತ್ರ್ಯಕ್ಕೆ ಅನುಗುಣವಾಗಿಯೇ ಇದೆ.

‘‘ಎರಡನೆಯದಾಗಿ, ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಮಹತ್ವದ ಸುದ್ದಿಯನ್ನು ಬಹಿರಂಗಪಡಿಸುವಂತೆ ಆಗ್ರಹಪಡಿಸಿದಾಗ್ಯೂ ನಿಗ್ರಹಿಸಿಡಲಾದ ಈ ಮಹತ್ವದ ಮಾಹಿತಿಯನ್ನು ನಾವು ಸಾರ್ವಜನಿಕ ಹಿತದೃಷ್ಟಿಯಿಂದ ತನಿಖಾ ಪತ್ರಿಕೋದ್ಯಮದ ಮೂಲಕ ಗಳಿಸಿ ಪ್ರಕಟಿಸಿದ್ದೇವೆ. ಮೂರನೆಯದಾಗಿ ನಾವು ಪ್ರಕಟಿಸಿರುವುದು ಕಳವಾದ ದಾಖಲೆಗಳೆಂಬ ಸರಕಾರದ ಆರೋಪದಿಂದಲೇ ದಾಖಲೆಗಳ ಯಥಾರ್ಥತೆಯನ್ನು ಋಜುವಾತುಗೊಳಿಸಿದಂತಾಗಿದೆ. ಇದು ಸತ್ಯ ಸಂಗತಿ, ಇದು ನಿಜವಾದ ವ್ಯವಹಾರ ಎಂಬುದಕ್ಕೆ ಬೇರಾವ ಸಾಕ್ಷಿ ಪುರಾವೆಯೂ ಬೇಕಿಲ್ಲ.’’ ಎಂದು ರಾಮ್ ಅವರು ತಿಳಿಸಿರುವುದರಿಂದ ಸರಕಾರದ ಸಾಚಾತನದ ನಟನೆಯ ಮುಖವಾಡ ಕಳಚಿಬಿದ್ದಿದೆ. ‘ದಿ ಹಿಂದೂ’ ಪತ್ರಿಕೆ ಮತ್ತು ಪತ್ರಕರ್ತ ರಾಮ್ ವಿರುದ್ಧ ಒಎಸ್‌ಎ ಅನ್ವಯ ಕ್ರಮಜರುಗಿಸಲಾಗುವುದೆಂಬ ಸರಕಾರದ ಹೇಳಿಕೆಯನ್ನು ‘ಎಡಿಟರ್ಸ್‌ ಗಿಲ್ಡ್’ ಮೊದಲಾದ ಪತ್ರಕರ್ತರ ಸಂಘಟನೆಗಳು ಖಂಡಿಸಿರುವುದು ನ್ಯಾಯೋಚಿತವಾದುದೇ ಆಗಿದೆ. ಸರಕಾರ ಇನ್ನಾದರೂ ಇಂಥ ಒಎಸ್‌ಎ ಗುಮ್ಮನನ್ನು ‘ಛೂ’ ಬಿಡುವ ಬೆದರಿಕೆಯ ಮಾರ್ಗಗಳನ್ನು ಬಿಟ್ಟು ನ್ಯಾಯವಾಗಿ ನಡೆದುಕೊಳ್ಳಬೇಕು. ಮಾಧ್ಯಮಗಳ ಸ್ವಾತಂತ್ರ್ಯ, ಹಕ್ಕು ಬಾಧ್ಯತೆಗಳನ್ನು ಗೌರವಿಸುವುದನ್ನು ಕಲಿಯಬೇಕು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News