ಶೌಚಗುಂಡಿಗಿಳಿದ ಪೌರಕಾರ್ಮಿಕ ವಿಷಾನಿಲ ಸೇವಿಸಿ ಮೃತ್ಯು, ನಾಲ್ವರು ಅಸ್ವಸ್ಥ

Update: 2019-03-18 17:28 GMT

ಮುಂಬೈ,ಮಾ.17: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶೌಚಗುಂಡಿಯೊಳಗಿಳಿದ ಪೌರ ಕಾರ್ಮಿಕನೊಬ್ಬ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದು, ಇತರ ನಾಲ್ವರು ಅಸ್ವಸ್ಥರಾಗಿದ್ದಾರೆ. ಗ್ರಾಂಟ್ ರೋಡ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತಪಟ್ಟ ವ್ಯಕ್ತಿಯನ್ನು ಬೃಹನ್ಮುಂಬಯಿ ಮಹಾನಗರಪಾಲಿಕೆಯ ಉದ್ಯೋಗಿ, 45 ವರ್ಷ ವಯಸ್ಸಿನ ರಾಕೇಶ್ ನಿಝಾಬ್ ಎಂದು ಗುರುತಿಸಲಾಗಿದೆ.

ಗಾಮ್‌ದೇವಿ ಠಾಣೆಯ ಪೊಲೀಸರು ಇದೊಂದು ಆಕಸ್ಮಿಕ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆಂದು ಸ್ಥಳೀಯ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.

ಗಿರಿಗಾಂವ್‌ನ ನಾನಾ ಚೌಕ್ ಪ್ರದೇಶದ ಸಮೀಪದ ಶೌಚಗುಂಡಿಯೊಳಗಿರುವ ಪೈಪ್‌ಲೈನನ್ನು ಸರಿಪಡಿಸಲು ಈ ಐವರು ಕಾರ್ಮಿಕರು ಆಗಮಿಸಿದ್ದರು. ಶೌಚಗುಂಡಿಗಿಳಿದ ಕೆಲವೇ ತಾಸುಗಳಲ್ಲಿ ಅವರು ಮೂರ್ಛೆತಪ್ಪಿ ಬಿದ್ದರು. ಕೂಡಲೇ ಅವರೆಲ್ಲರನ್ನೂ ಶೌಚಗುಂಡಿಯಿಂದ ಎತ್ತಿ, ಸಮೀಪದ ಬಿವೈಎಲ್ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಿಝಾಬ್, ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಅಸ್ವಸ್ಥರಾದ ಇತರ ನಾಲ್ವರು ಪೌರಕಾರ್ಮಿಕರನ್ನು ಬಾಳಾಸಾಹೇಬ್, ಉಮೇಶ್ ಪವಾರ್, ಸುರೇಶ್ ಪವಾರ್ ಹಾಗೂ ಶಾಂತರಾಮ್ ಭಾಕ್ಟೆ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆಯ ಡೀನ್ ರಮೇಶ್ ಭಾರ್ಮಲ್ ತಿಳಿಸಿದ್ದಾರೆ.

ನಿಝಾಬ್‌ರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆಯೆಂದು ಭರ್ಮಾಲ್ ದೃಢಪಡಿಸಿದ್ದಾರೆ.

ಆದಾಗ್ಯೂ ರಮೇಶ್ ಅವರ ಸಾವಿನ ಕಾರಣವನ್ನು ಇನ್ನಷ್ಟೇ ದೃಢಪಡಿಸಬೇಕಾಗಿದೆ. ವಿಧಿವಿಧಾನ ಪ್ರಯೋಗಾಲಯದಿಂದ ರಾಸಾಯನಿಕ ವಿಶ್ಲೇಷಣೆಯ ವರದಿ ಬಂದ ಬಳಿಕವಷ್ಟೇ, ಸಾವಿನ ಕಾರಣದ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಬಹುದಾಗಿದೆಯೆಂದು ಅವರು ಹೇಳಿದರು. ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ ಸುರಕ್ಷತಾ ಉಡುಪುಗಳನ್ನು ಒದಗಿಸದೆ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿರುವುದಾಗಿ, ಮುಂಬೈ ಪೌರಕಾರ್ಮಿಕರ ಸಂಘದ ವರಿಷ್ಠ ಮಿಲಿಂ ರಾನಡೆ ಆರೋಪಿಸಿದ್ದಾರೆ ಹಾಗೂ ಪೌರಕಾರ್ಮಿಕ ಸಾವಿಗೆ, ಬಿಎಂಸಿಯ ಹಿರಿಯ ಪೌರಾಡಳಿತ ಅಧಿಕಾರಿಗಳು ಹೊಣೆಗಾರರೆಂದು ಆರೋಪಿಸಿದ್ದಾರೆ.

ಶೌಚಗುಂಡಿಗ ಕಾರ್ಮಿಕರನ್ನು ಇಳಿಸುವ ಮೊದಲು ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕಾಗಿದೆ ಹಾಗೂ ಪೌರಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕಾಗಿದ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News