ದಲಿತರ ಬೆಂಬಲ ಕಟ್ಟಿಟ್ಟ ಬುತ್ತಿಯಲ್ಲ: ಬಿಜೆಪಿ-ಶಿವಸೇನೆಗೆ ಅಠಾವಳೆ ಎಚ್ಚರಿಕೆ

Update: 2019-03-18 18:17 GMT

ಮುಂಬೈ,ಮಾ.17: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಭಾರತೀಯ ರಿಪಬ್ಲಿಕನ್ ಪಾರ್ಟಿ ಹೊರಗುಳಿದರೂ, ತಾನು ಎನ್‌ಡಿಎ ಜೊತೆ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲವೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ. ಆದರೆ ದಲಿತರ ಬೆಂಬಲ, ತಮಗೆ ಕಟ್ಟಿಟ್ಟ ಬುತ್ತಿ ಎಂದು ಭಾವಿಸಕೂಡದೆಂದು ಅವರು ಬಿಜೆಪಿ ಹಾಗೂ ಶಿವಸೇನೆಗೆ ಎಚ್ಚರಿಕೆ ನೀಡಿದ್ದಾರೆ.

  ಭಾರತೀಯ ರಿಪಬ್ಲಿಕನ್ ಪಕ್ಷವು ಕೇಂದ್ರದಲ್ಲಿ ಆಡಳಿತರೂಢ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದೆ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷವನ್ನು ಬಿಜೆಪಿ-ಶಿವಸೇನಾ ಮೈತ್ರಿಯಿಂದ ಹೊರಗಿಡಲಾಗಿತ್ತು.

   ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ ಎಪ್ರಿಲ್ 11ರಿಂದ ಮೊದಲ್ಗೊಂಡು ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಶಿವಸೇನೆ 23 ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ, ಉಳಿದ ಸ್ಥಾನಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದೆ.

 ಆರ್‌ಪಿಐ ಪಕ್ಷವನ್ನು ಕಡೆಗಣಿಸುವ ಶಿವಸೇನೆ-ಬಿಜೆಪಿ ನಾಯಕರ ನಿರ್ಧಾರದಿಂದ ತನಗೆ ತೀವ್ರ ಅಸಮಾಧಾನವಾಗಿದೆಯೆಂದು ಅಠಾವಳೆ ತಿಳಿಸಿದ್ದಾರೆ. ಕನಿಷ್ಠ ಒಂದು ಲೋಕಸಭಾ ಕ್ಷೇತ್ರವನ್ನಾದರೂ ಅವರು ಆರ್‌ಪಿಐಗೆ ಬಿಟ್ಟುಕೊಡಬಹುದಿತ್ತು ಎಂದು ಅವರು ಹೇಳಿದ್ದಾರೆ.

   ಆರ್‌ಪಿಐ ಪಕ್ಷದಗ ಇಬ್ಬರಿಗೆ ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯರನ್ನು ನೇಮಕಗೊಳಿಸುವುದಾಗಿಯೂ ಅವರನ್ನು ತಲಾ ಆರು ತಿಂಗಳ ಅವಧಿಗೆ ಆವರ್ತನೆಯ ಆಧಾರದಲ್ಲಿ ರಾಜ್ಯ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಬರೀ ಕಾಗದದಲ್ಲಿ ಉಳಿದುಕೊಂಡಿದೆಯೆಂದು ಅಠಾವಳೆ ಬೇಸರ ವ್ಯಕ್ತಪಡಿಸಿದರು. ಆದಾಗ್ಯೂ ಎನ್‌ಡಿಎ ಮೈತ್ರಿಕೂಟದಿಂದ ತಾನು ದೂರವಿರದಿರಲು ನಿರ್ಧರಿಸಿದ್ದೇನೆ. ಈ ಹಂತದಲ್ಲಿ ತಾನು ಯಾವುದೇ ಅತಿರೇಕದ ನಿರ್ಧಾರ ಕೈಗೊಂಡಲ್ಲಿ ಅದು ‘ಅಪ್ರಬುದ್ಧ ರಾಜಕಾರಣ’ವೆನಿಸಿತು ಎಂದು ಅಠವಳೆ ಹೇಳಿದರು.

ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುವ ನಿರ್ಧಾರವನ್ನು ಆರ್‌ಪಿಐ ಪಕ್ಷ ಕೈಗೊಂಡಿದೆ. ಆದರೆ, ದಲಿತರ ಬೆಂಬಲವನ್ನು ಗುತ್ತಿಗೆಗೆ ಪಡೆದಿರುವಂತೆ ಭಾವಿಸದಂತೆ ಬಿಜೆಪಿ-ಶಿವಸೇನೆಗೆ ಎಚ್ಚರಿಕೆ ನೀಡಿದ ಅಠವಳೆ ‘ನಮಗೆ ಗೌರವ ನೀಡಿ, ನಮ್ಮಿಂದಲೂ ಗೌರವ ಪಡೆಯಿರಿ’ ಎಂದರು.

ದೇಶದ ಸಂವಿಧಾನವನ್ನು ಬದಲಾಸುವುದಿಲ್ಲ ಹಾಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಓಬಿಸಿ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು, ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕೆಂದು ಅಠಾವಳೆ ಆಗ್ರಹಿಸಿದರು. ಭೂರಹಿತ ದಲಿತರಿಗೆ ತಲಾ ಐದು ಎಕರೆ ಭೂಮಿ ವಿತರಿಸುವ ಭರವಸೆ ನೀಡಬೇಕೆಂದು ಅಠಾವಳೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News