ಭರ್ಜರಿ ಗೆಲುವಿನೊಂದಿಗೆ ಟ್ರೋಫಿ ಎತ್ತಿ ಹಿಡಿಯಲು ಬಯಸಿದ್ದೆವು: ಚೆಟ್ರಿ

Update: 2019-03-18 18:53 GMT

ಹೊಸದಿಲ್ಲಿ, ಮಾ.18: ‘‘ತನ್ನ ತಂಡ ಮೊದಲ ಬಾರಿ ಜಯಿಸಿರುವ ಐಎಸ್‌ಎಲ್ ಟ್ರೋಫಿ ಅತ್ಯಂತ ಮಧುರವಾಗಿದೆ. ಮುಖ್ಯವಾಗಿ ಕಳೆದ ವರ್ಷ ಚೆನ್ನೈ ಎಫ್‌ಸಿ ವಿರುದ್ಧ ಸೋತು ಕಳೆದುಕೊಂಡಿದ್ದ ಟ್ರೋಫಿಯನ್ನು ಈ ಬಾರಿ ಗೆದ್ದುಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಬಾರಿ ನಾವು ಭರ್ಜರಿ ಅಂತರದಿಂದ ಗೆಲುವು ಸಾಧಿಸುವ ಬಯಕೆ ಹೊಂದಿದ್ದೆವು’’ ಎಂದು ಬೆಂಗಳೂರು ಎಫ್‌ಸಿ ನಾಯಕ ಸುನೀಲ್ ಚೆಟ್ರಿ ಹೇಳಿದ್ದಾರೆ.

ರವಿವಾರ ರಾತ್ರಿ ನಡೆದ ಐಎಸ್‌ಎಲ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ರಾಹುಲ್ ಭೆಕೆ ಹೆಚ್ಚುವರಿ ಸಮಯ(117ನೇ ನಿಮಿಷ)ದಲ್ಲಿ ಹೆಡರ್‌ಮೂಲಕ ಗಳಿಸಿದ ಗೋಲು ನೆರವಿನಿಂದ ಬೆಂಗಳೂರು ತಂಡ ಗೋವಾ ಎಫ್‌ಸಿಯನ್ನು 1-0 ಅಂತರದಿಂದ ಸೋಲಿಸಿತ್ತು. ಬೆಂಗಳೂರು ಕಳೆದ ವರ್ಷದ ಆವೃತ್ತಿಯ ಟೂರ್ನಿಯಲ್ಲೂ ಫೈನಲ್‌ಗೆ ತಲುಪಿತ್ತು. ಆದರೆ, ಚೆನ್ನೈಯಿನ್ ಎಫ್‌ಸಿ ವಿರುದ್ಧ ಶರಣಾಗಿತ್ತು. ‘‘ಕಳೆದ ವರ್ಷ ನಾವು ಐಎಸ್‌ಎಲ್ ಫೈನಲ್‌ನಲ್ಲಿ ಸೋತಾಗ, ಮುಂದಿನ ವರ್ಷ ವಾಪಸ್ ಬರುತ್ತೇವೆ ಎಂದಿದ್ದೆ. ಬಾಲ್‌ಬಾಯ್‌ಯಿಂದ ತೊಡಗಿ ಕೋಚ್ ಕಾರ್ಲ್ಸ್‌ತನಕ ಪ್ರತಿಯೊಬ್ಬರೂ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದರು. ಈ ಪ್ರಶಸ್ತಿಯನ್ನು ಭರ್ಜರಿ ಗೆಲುವಿನೊಂದಿಗೆ ಗೆದ್ದುಕೊಳ್ಳಲು ಬಯಸಿದ್ದೆವು. ಕಳೆದ ವರ್ಷ ಫೈನಲ್‌ನಲ್ಲಿ ಸೋತ ಕಾರಣ ಈ ವರ್ಷ ಪ್ರಶಸ್ತಿ ಗೆದ್ದಿರುವುದಕ್ಕೆ ಖುಷಿಯಾಗುತ್ತಿದೆ’’ ಎಂದು ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೆಟ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News