ನಕಲಿ ಎನ್‍ಕೌಂಟರ್ ಪ್ರಕರಣ: ವಂಝಾರ ವಿರುದ್ಧ ಕ್ರಮಕ್ಕೆ ಅನುಮತಿಸಲು ಗುಜರಾತ್ ಸರಕಾರ ನಿರಾಕರಣೆ

Update: 2019-03-19 11:06 GMT

ಅಹ್ಮದಾಬಾದ್, ಮಾ.19: ಇಶ್ರತ್ ಜಹಾನ್ ಮತ್ತು ಇತರ ಮೂವರ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಡಿ.ಜಿ. ವಂಝಾರ ಹಾಗೂ ಎನ್.ಕೆ. ಅಮೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗುಜರಾತ್ ಸರಕಾರ ಅನುಮತಿ ನಿರಾಕರಿಸಿದೆ ಎಂದು ಸಿಬಿಐ ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯದೆದುರು ಹೇಳಿದೆ.

ಸಿಬಿಐ ವಕೀಲ ಆರ್.ಸಿ. ಕೊಡೇಕರ್ ಅವರು ಈ ಕುರಿತಂತೆ ವಿಶೇಷ ಸಿಬಿಐ ನ್ಯಾಯಾಧೀಶ ಜೆ.ಕೆ. ಪಾಂಡ್ಯ ಅವರಿಗೆ ಪತ್ರವೊಂದನ್ನು ಸಲ್ಲಿಸಿದರು. ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 197 ಅನ್ವಯ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳು  ಪ್ರಕರಣದ ಆರೋಪಿಗಳಾಗಿದ್ದರು.

ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಕೈಬಿಡುವ ಸಲುವಾಗಿ ಅಪೀಲನ್ನು ಸಲ್ಲಿಸಲು ಪ್ರತಿವಾದಿ ವಕೀಲರು ನಂತರ ನ್ಯಾಯಾಲಯದ ಅನುಮತಿ ಕೋರಿದರು. ಈ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯ ಮಾರ್ಚ್ 26ರಂದು ಅಪೀಲು ಸಲ್ಲಿಸುವಂತೆ ತಿಳಿಸಿದೆ.

ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಈ ಹಿಂದೆ ಈ ಇಬ್ಬರು ಮಾಜಿ ಅಧಿಕಾರಿಗಳು ಸಲ್ಲಿಸಿದ್ದ ಅಪೀಲುಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತಲ್ಲದೆ ರಾಜ್ಯ ಸರಕಾರದಿಂದ ಅನುಮತಿ ಪಡೆಯಲು ಸಿಬಿಐ ಬಯಸಿದೆಯೇ ಎಂದು ತನ್ನ ನಿಲುವನ್ನು ಸ್ಪಷ್ಟ ಪಡಿಸಲು ಹೇಳಿತ್ತು. ಅಂತೆಯೇ ಸಿಬಿಐ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು.

ಈ ಪ್ರಕರಣದಲ್ಲಿ ವಂಝಾರ ಮತ್ತು ಅಮೀನ್ ಸಹಿತ ಒಟ್ಟು ಏಳು ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ವಂಝಾರ ಮಾಜಿ ಡಿಐಜಿಯಾಗಿದ್ದರೆ, ಅಮೀನ್ ಎಸ್‍ಪಿ ಆಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News