ಸಂಝೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ನಾಲ್ವರ ಖುಲಾಸೆ

Update: 2019-03-20 18:17 GMT

ಪಂಚಕುಲ, ಮಾ. 20: ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಪೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸಹಿತ ನಾಲ್ವರನ್ನು ಪಂಚಕುಲ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ.

ತನ್ನ ದೇಶದ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುವಂತೆ ಪಾಕಿಸ್ತಾನಿ ಮಹಿಳೆ ಸಲ್ಲಿಸಿದ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ತಿರಸ್ಕರಿಸಿದ ಬಳಿಕ ಈ ತೀರ್ಪು ಹೊರಬಿದ್ದಿದೆ.

 ಎಲ್ಲಾ ನಾಲ್ವರು ಆರೋಪಿಗಳಾದ ನಭಾ ಕುಮಾರ್ ಸರ್ಕಾರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಾನ್ ಹಾಗೂ ರಾಜಿಂದರ್ ಚೌಧರಿಯನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ ಎಂದು ಎನ್‌ಐಎ ಪರ ವಕೀಲ ರಾಜನ್ ಮಲ್ಹೋತ್ರ ತಿಳಿಸಿದ್ದಾರೆ.

 ದಿಲ್ಲಿ ಮತ್ತು ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿಯನ್ನು ಸಂಪರ್ಕಿಸುವ ಪಾಕ್ಷಿಕ ರೈಲನ್ನು 2007 ಫೆಬ್ರವರಿ 18ರಂದು ರಾತ್ರಿ ಸ್ಫೋಟಿಸಲಾಗಿತ್ತು. ರೈಲಿನಲ್ಲಿದ್ದ 42 ಮಂದಿ ಪಾಕಿಸ್ತಾನಿಯರು ಸೇರಿದಂತೆ ಒಟ್ಟು 68 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ಭಯೋತ್ಪಾದಕರು ರೈಲು ಸ್ಫೋಟಕ್ಕೆ ಐಇಡಿ (ಸುಧಾರಿತ ಸ್ಫೋಟಕ) ಹಾಗೂ ದಹನಶೀಲ ವಸ್ತುಗಳನ್ನು ಬಳಸಿದ್ದರು ಹಾಗೂ ಹರ್ಯಾಣದ ಪಾಣಿಪಾತ್ ಸಮೀಪ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿತ್ತು ಎಂದು ತನಿಖೆಗಾರರು ಹೇಳಿದ್ದರು. ಇದೇ ರೈಲಿನ ಇತರ ಬೋಗಿಗಳಲ್ಲಿ ಎರಡು ಸ್ಫೋಟಗೊಳ್ಳದ ಸೂಟ್‌ಕೇಸ್ ಬಾಂಬ್ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News