ಕಸ್ಟಡಿಯಲ್ಲಿ ಮೃತಪಟ್ಟ ಅಧ್ಯಾಪಕನಿಗೆ ಚಿತ್ರಹಿಂಸೆ ನೀಡಲಾಗಿತ್ತು: ಸಹೋದರನ ಆರೋಪ

Update: 2019-03-20 15:48 GMT

 ಶ್ರೀನಗರ, ಮಾ.20: ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಆವಂತಿಪೊರಾದ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಶಾಲಾ ಪ್ರಾಧ್ಯಾಪಕ ರಿಝ್ವಾನ್ ಪಂಡಿತ್‌ಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಮೃತರ ಸಹೋದರ ಹೇಳಿದ್ದಾರೆ.

ಚಿತ್ರಹಿಂಸೆಯ ಗುರುತು ಮೃತದೇಹದ ಮೇಲೆ ಸ್ಪಷ್ಟವಾಗಿ ಕಾಣುತ್ತಿತ್ತು . ಸಹೋದರನ ಎಡಗಣ್ಣು ಕಪ್ಪು ಬಣ್ಣಕ್ಕೆ ತಿರುಗಿತ್ತು ಹಾಗೂ ಮುಖದ ಎಡಭಾಗ ಊದಿಕೊಂಡಿತ್ತು. ತಲೆಯ ಭಾಗಕ್ಕೆ ಏಟಾಗಿದ್ದು, ಎರಡು ಹೊಲಿಗೆ ಹಾಕಲಾಗಿತ್ತು. ತೊಡೆಗಳ ಮೇಲೆಯೂ ಗಾಯದ ಮತ್ತು ಸುಟ್ಟ ಗುರುತಿತ್ತು. ಹೊಟ್ಟೆಯ ಭಾಗವೂ ಊದಿಕೊಂಡಿತ್ತು. ಅಲ್ಲದೆ ಮೂಗಿನಲ್ಲಿ ರಕ್ತವಿತ್ತು. ಎಡಕಿವಿಯಲ್ಲಿ ಕೆಸರು ತುಂಬಿತ್ತು. ಅವರು ಮುಖವನ್ನು ಕೊಳಕಾಗಿಸಲು ಪ್ರಯತ್ನಿಸಿದ್ದರು ಎಂದು ಮೃತ ಪ್ರಾಧ್ಯಾಪಕರ ಸಹೋದರ ಮುಬಶ್ಶಿರ್ ಹಸ್ಸನ್ ಹೇಳಿದ್ದಾರೆ.

ಕುಟುಂಬದವರ ಅನುಮತಿ ಪಡೆಯದೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶ್ರೀನಗರದ ಮಹಾರಾಜ ಹರಿಸಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಅದರ ವರದಿ ಇನ್ನೂ ಕೈಸೇರಿಲ್ಲ. ಬಳಿಕ ಶ್ರೀನಗರದ ಆಸ್ಪತ್ರೆಯಿಂದ ಮೃತದೇಹವನ್ನು ಕೊಂಡೊಯ್ಯುವಂತೆ ಪೊಲೀಸರು ತಿಳಿಸಿದರು. ಆದರೆ ಕುಟುಂಬದವರು ಇದಕ್ಕೆ ಒಪ್ಪಲಿಲ್ಲ. ರಿಝ್ವಾನ್‌ನನ್ನು ಪೊಲೀಸರೇ ಬಂಧಿಸಿ ಕರೆದೊಯ್ದಿರುವ ಕಾರಣ ಆತನ ಮೃತದೇಹ ಮನೆಗೆ ತಲುಪಿಸಲು ಅವರೇ ಕ್ರಮ ಕೈಗೊಳ್ಳಲಿ ಎಂದು ಕುಟುಂಬದ ಸದಸ್ಯರು ಸ್ಪಷ್ಟವಾಗಿ ತಿಳಿಸಿದರು . ಇದರಂತೆ ಮಂಗಳವಾರ ರಾತ್ರಿ ವೇಳೆ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಹಸನ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪೊಲೀಸರಿಗೆ ಇನ್ನೂ ಸಲ್ಲಿಸಿಲ್ಲ. ಆದರೆ ಮರಣಕ್ಕೆ ಕಾರಣ ಏನೆಂಬುದನ್ನು ಈಗ ಬಹಿರಂಗಪಡಿಸಲಾಗದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಘಟನೆಯ ಬಗ್ಗೆ ನ್ಯಾಯಾಧಿಕಾರಿಯ ತನಿಖೆಗೆ ಸರಕಾರ ಆದೇಶಿಸಿದೆ.

ನಿರ್ಧರಿಸಿದ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಲಾಗುವುದು ಎಂದು ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಗೋಯೆಲ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಎಂಬುದು ಕಾನೂನಿನಂತೆ ಅಗತ್ಯ ಕ್ರಮವಾಗಿದ್ದು ಇದಕ್ಕೆ ಮೃತವ್ಯಕ್ತಿಯ ಕುಟುಂಬದವರ ಅನುಮತಿ ಅಗತ್ಯವಿಲ್ಲ. ಮ್ಯಾಜಿಸ್ಟ್ರೇಟ್‌ರ ನಿಗಾದಲ್ಲಿ ಮರಣೋತ್ತರ ಪರೀಕ್ಷೆ ನಡೆಯುವ ಕಾರಣ ಇದರಿಂದ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಕಸ್ಟಡಿಯಲ್ಲಿ ರಿಝ್ವಾನ್ ಸಾವನ್ನಪ್ಪಿರುವ ಘಟನೆಯನ್ನು ಖಂಡಿಸಿ ಪ್ರತ್ಯೇಕತಾವಾದಿ ಮುಖಂಡರಾದ ಉಮರ್ ಫಾರೂಕ್, ಯಾಸಿನ್ ಮಲಿಕ್ ಹಾಗೂ ಸೈಯದ್ ಅಲಿ ಶಾ ಗೀಲಾನಿ ಅವರು ಬುಧವಾರ ಕಾಶ್ಮೀರದಲ್ಲಿ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶ್ರೀನಗರದ ಲಾಲ್‌ಚೌಕ ಪ್ರದೇಶದಲ್ಲಿ ಎಲ್ಲಾ ಅಂಗಡಿ, ವಾಣಿಜ್ಯ ಕೇಂದ್ರಗಳು ಬಾಗಿಲು ಮುಚ್ಚಿದ್ದವು. ದಕ್ಷಿಣ ಕಾಶ್ಮೀರ ಭಾಗದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News