ಜನರು ಮೂರ್ಖರು ಎಂದು ಭಾವಿಸುವುದನ್ನು ಪ್ರಧಾನಿ ನಿಲ್ಲಿಸಲಿ: ಪ್ರಿಯಾಂಕಾ ಗಾಂಧಿ

Update: 2019-03-20 15:52 GMT

ಹೊಸದಿಲ್ಲಿ, ಮಾ. 20: ಜನರು ಮೂರ್ಖರು ಎಂದು ಭಾವಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಲಿ ಹಾಗೂ ಜನರು ಎಲ್ಲವನ್ನೂ ನೋಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ.

 ಪ್ರಧಾನಿ ಮೋದಿ ಅವರು ಬ್ಲಾಗ್ ಸ್ಪಾಟ್‌ನಲ್ಲಿ, ‘‘ಸಾಂಸ್ಥಿಕ ಅವಮಾನ ಕಾಂಗ್ರೆಸ್‌ನ ದಾರಿ. ಕಾಂಗ್ರೆಸ್‌ನ ಉನ್ನತ ನಾಯಕರು ಒಂದಲ್ಲ ಒಂದು ಪ್ರಮುಖ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ.’’ ಎಂಬ ಪೋಸ್ಟ್‌ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಈ ಪ್ರತಿಕ್ರಿಯೆ ನೀಡಿದ್ದಾರೆ.

ನೀವೆಲ್ಲರೂ ಭಾಗವಾಗಿರುವ ಸಂಸ್ಥೆ ಸಹಿತ ಈ ದೇಶದಲ್ಲಿರುವ ಪ್ರತಿ ಸಂಸ್ಥೆಗಳ ಮೇಲೆ ಪ್ರಧಾನಿ ಮೋದಿ ಅವರು ಕಳೆದ ಐದು ವರ್ಷಗಳಿಂದ ದಾಳಿ ನಡೆಸುತ್ತಿದ್ದಾರೆ ಎಂದು ಗಂಗಾ ನದಿಯಲ್ಲಿ ದೋಣಿ ಪ್ರಯಾಣದ ಕೊನೆಯ ದಿನವಾದ ಬುಧವಾರ ಉತ್ತರಪ್ರದೇಶದ ಮಿರ್ಝಾಪುರದಲ್ಲಿ ಸುದ್ದಿಗಾರರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದರು.

ಮೋದಿ ನೇತೃತ್ವದ ಸರಕಾರಕ್ಕೆ ಪಕ್ಷ ಹೆದರದು. ಮೋದಿ ವಿರುದ್ಧ ಮಾತನಾಡುವವರಿಗೆ ಹೆದರಿಕೆ ಇದೆ ಎಂಬುದು ಅವರ ಭಾವನೆ. ಇದು ಸತ್ಯವಲ್ಲ. ಅವರು ಎಷ್ಟು ಕಿರುಕುಳ ನೀಡುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾರೆವು. ನಾವು ಅವರಿಗೆ ಹೆದರಲಾರೆವು. ನಾವು ಅವರೊಂದಿಗೆ ನಿರಂತರ ಹೋರಾಡಲಿದ್ದೇವೆ. ಅವರು ನಮಗೆ ಹೆಚ್ಚೆಚ್ಚು ಕಿರುಕುಳ ನೀಡಿದರೆ, ನಾವು ಸದೃಢವಾಗಿ ಅವರೊಂದಿಗೆ ಮತ್ತಷ್ಟು ಹೋರಾಡಲಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News