ಪಾರಿಕ್ಕರ್ ಚಿತೆಯ ಬೆಂಕಿ ಆರುವವರೆಗೂ ಕಾಯಲಿಲ್ಲ: ಮಿತ್ರಪಕ್ಷ ಬಿಜೆಪಿ ವಿರುದ್ಧ ಶಿವಸೇನೆ ಟೀಕಾಪ್ರಹಾರ

Update: 2019-03-20 17:14 GMT

ಮುಂಬೈ, ಮಾ.20: ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರ ನಿಧನದ ಬಳಿಕ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ರಾಜಕೀಯ ನಾಟಕಗಳ ವಿರುದ್ಧ ಬುಧವಾರ ತೀವ್ರ ದಾಳಿ ನಡೆಸಿರುವ ಶಿವಸೇನೆಯು, ಇದು ‘ಪ್ರಜಾಪ್ರಭುತ್ವದ ಭಯಂಕರ ಸ್ಥಿತಿ’ ಎಂದು ಬಣ್ಣಿಸಿದೆ. ಅವರು ಮುಖ್ಯಮಂತ್ರಿಗಳ ಚಿತೆಯ ಬೆಂಕಿ ಆರುವವರೆಗಾದರೂ ಕಾಯಲಿಲ್ಲ ಎಂದು ಹೇಳಿದೆ.

ಮಾನ-ಮರ್ಯಾದೆಯಿಲ್ಲದ ಅಧಿಕಾರದ ಆಟವು ಪಾರಿಕ್ಕರ್ ಅವರ ಚಿತಾಭಸ್ಮವು ಗೋವಾದ ಮಣ್ಣಿನಲ್ಲಿ ಲೀನವಾಗುವ ಮೊದಲೇ ಆರಂಭಗೊಂಡಿತ್ತು ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಕುಟುಕಿದೆ.

ಬಿಜೆಪಿ ಮಂಗಳವಾರದವರೆಗೆ ಕಾದಿದ್ದರೆ ಗೋವಾ ಸರಕಾರ ಉರುಳಬಹುದಿತ್ತು ಮತ್ತು ಉಪಮುಖ್ಯಮಂತ್ರಿಗಳಿಬ್ಬರ ಪೈಕಿ ಓರ್ವರು ಕಾಂಗ್ರೆಸ್‌ಗೆ ಸೇರಿ ಅಪೇಕ್ಷಿತ ಹುದ್ದೆಯನ್ನು ಪಡೆಯುವ ಸಾಧ್ಯತೆಯಿತ್ತು ಎಂದು ಅದು ಹೇಳಿದೆ.

ರವಿವಾರ ಸಂಜೆ ಪಾರಿಕ್ಕರ್ ನಿಧನದ ಬೆನ್ನಿಗೇ ಗೋವಾದಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳಾದ ವಿಜಯ ಸರ್ದೇಸಾಯಿ ನೇತೃತ್ವದ ಜಿಎಫ್‌ಪಿ ಮತ್ತು ಸುದಿನ್ ಧಾವಳಿಕರ್ ನೇತೃತ್ವದ ಎಂಜಿಪಿ ನಡುವೆ ನೂತನ ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ರಾಜಕೀಯ ನಾಟಕ ಆರಂಭಗೊಂಡಿತ್ತು. ಪಾರಿಕ್ಕರ್ ಅಂತ್ಯಸಂಸ್ಕಾರ ನಡೆದ ಕೆಲವೇ ಗಂಟೆಗಳ ಬಳಿಕ ಬಿಜೆಪಿಯ ಪ್ರಮೋದ್ ಸಾವಂತ್ ಅವರು ನೂತನ ಮುಖ್ಯಮಂತ್ರಿಯಾಗಿ ಹಾಗೂ ಸರ್ದೇಸಾಯಿ ಮತ್ತು ಧಾವಳಿಕರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಅಂತ್ಯದಲ್ಲಿ ತಮ್ಮ ಪಾಲುಗಳಿಗಾಗಿ ಬೆಕ್ಕುಗಳಂತೆ ಕಾದು ಕುಳಿತಿದ್ದವರು ಸೋಮವಾರ ಮಧ್ಯರಾತ್ರಿಯ ಬಳಿಕ ಸಾವಂತ್ ಅವರು ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಈ ಅಸಹ್ಯ ಆಟವನ್ನು ಕೊನೆಗೊಳಿಸಿದ್ದರು ಎಂದಿರುವ ಶಿವಸೇನೆಯು,ಇದು ‘ಪ್ರಜಾಪ್ರಭುತ್ವದ ಭಯಂಕರ ಸ್ಥಿತಿ’ಯಾಗಿದೆ. ಪಾರಿಕ್ಕರ್ ಅವರ ಚಿತೆಯ ಬೆಂಕಿ ಆರುವವರೆಗಾದರೂ ಅವರು ಕಾಯಬಹುದಿತ್ತು. ಪ್ರಮಾಣ ವಚನ ಸ್ವೀಕಾರಕ್ಕಾಗಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಮಂಗಳವಾರ ಬೆಳಗಿನವರೆಗೂ ಕಾದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದೆ.

ಇಬ್ಬರು ವ್ಯಕ್ತಿಗಳನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕಗೊಳಿಸುವ ಇಡೀ ಆಟ ನಡೆಯುತ್ತಿದ್ದಾಗ ಗೋವಾದ ಅಮಾಯಕ ಜನರು ಅಸಹಾಯಕರಾಗಿ ಅದನ್ನು ಸಹಿಸಿಕೊಳ್ಳುವಂತಾಗಿತ್ತು ಎಂದಿರುವ ಶಿವಸೇನೆ,ಇಂದಿಗೂ ಗೋವಾದ ಜನರು ಶೋಕದಲ್ಲಿದ್ದಾರೆ. ಮಾಜಿ ರಕ್ಷಣಾ ಸಚಿವ ಪಾರಿಕ್ಕರ್ ನಿಧನದ ಬಳಿಕ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿತ್ತು. ಆದರೆ ರಾಷ್ಟ್ರಧ್ವಜವು ಅರ್ಧಮಟ್ಟದಲ್ಲಿ ಹಾರಾಡುತ್ತಿದೆ ಎನ್ನುವುದು ರಾಜಕೀಯ ನಾಟಕದಲ್ಲಿ ತೊಡಗಿದ್ದವರಿಗೆ ಗೊತ್ತಿದ್ದಂತಿಲ್ಲ ಎಂದು ಹೇಳಿದೆ. ಆಡಳಿತ ಮೈತ್ರಿಕೂಟದಲ್ಲಿ ಕೇವಲ 19 ಶಾಸಕರಿದ್ದು, ಅವರಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿರುವುದು ನಾಚಿಕೆಗೇಡು ಎಂದು ಅದು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News