ಸಂಸ್ಥೆಯ ಮುಂದುವರಿಕೆಗೆ ಬ್ಯಾಂಕುಗಳು ಎಲ್ಲ ಪ್ರಯತ್ನಗಳನ್ನು ಮಾಡಲಿವೆ: ಎಸ್‌ಬಿಐ ಅಧ್ಯಕ್ಷ

Update: 2019-03-20 17:21 GMT

ಹೊಸದಿಲ್ಲಿ, ಮಾ.20: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್‌ಗೆ ಸಾಲ ನೀಡಿರುವ ಬ್ಯಾಂಕುಗಳು ಅದು ಕಾರ್ಯವನ್ನು ಮುಂದುವರಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಿವೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ ಅವರು ಬುಧವಾರ ಹೇಳಿದರು. ಎಸ್‌ಬಿಐ ಜೆಟ್‌ಗೆ ಅತ್ಯಂತ ಹೆಚ್ಚಿನ ಸಾಲವನ್ನು ನೀಡಿದ್ದು, ವಿಮಾನಯಾನ ಸಂಸ್ಥೆಯ ಪುನಃಶ್ಚೇತನಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳ ನೇತೃತ್ವ ವಹಿಸಿದೆ.

ಬುವಾರ ಕೇಂದ್ರ ವಿತ್ತ ಸಚಿವ ಅರುಣ ಜೇಟ್ಲಿ,ವಾಯುಯಾನ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೋಲಾ ಮತ್ತು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿರುವ ಕುಮಾರ,ಜೆಟ್ ಏರ್‌ವೇಸ್‌ನ ಕಾರ್ಯ ನಿರ್ವಹಣೆ ಸ್ಥಗಿತಗೊಳ್ಳದಂತೆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದರು.

 ಸರಕಾರಿ ಬ್ಯಾಂಕುಗಳು ಮತ್ತು ಸಂಸ್ಥೆಯಲ್ಲಿ ಶೇ.24ರಷ್ಟು ಪಾಲು ಬಂಡವಾಳವನ್ನು ಹೊಂದಿರುವ ಅಬುಧಾಬಿಯ ಎತಿಹಾದ್ ಏರ್‌ವೇಸ್ ನೇತೃತ್ವದಲ್ಲಿ ಸಂಕಷ್ಟದಿಂದ ಪಾರಾಗಲು ಯೋಜನೆಯೊಂದನ್ನು ಜೆಟ್ ರೂಪಿಸುತ್ತಿದೆ ಎಂದು ಅದರ ಅಧ್ಯಕ್ಷ ನರೇಶ್ ಗೋಯಲ್ ಅವರು ಈ ಮುನ್ನ ತಿಳಿಸಿದ್ದರು.

ಸಾಲದಲ್ಲಿ ಮುಳುಗಿರುವ ಜೆಟ್ ಏರ್‌ವೇಸ್‌ನ 41 ವಿಮಾನಗಳು ಮಾತ್ರ ಕಾರ್ಯಾಚರಣೆಗೆ ಲಭ್ಯವಿವೆ ಮತ್ತು ಮುಂದಿನ ವಾರಗಳಲ್ಲಿ ಈ ಸಂಖ್ಯೆ ಇನ್ನಷ್ಟು ತಗ್ಗಬಹುದು ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು ಮಂಗಳವಾರ ಹೇಳಿತ್ತು. 119 ವಿಮಾನಗಳನ್ನು ಹೊಂದಿರುವ ಜೆಟ್ ಆರ್ಥಿಕ ಸಂಕಷ್ಟದಿಂದಾಗಿ ತನ್ನ ಯಾನಗಳನ್ನು ಕಡಿತಗೊಳಿಸಿದೆ. ಮಾರ್ಚ್, 2018ರಿಂದ ಸತತ ಮೂರು ತ್ರೈಮಾಸಿಕಗಳಿಗೆ ಅದು 1,000 ಕೋ.ರೂ.ಗೂ ಅಧಿಕ ನಷ್ಟವನ್ನು ದಾಖಲಿಸಿದೆ. ಡಿ.31ರಿಂದ ಅದು ಬ್ಯಾಂಕುಗಳಿಗೆ ಸಾಲ ಮರು ಪಾವತಿಸುವಲ್ಲಿ ವಿಫಲಗೊಂಡಿದೆ.

ಜೆಟ್ ಏರ್‌ವೇಸ್‌ನ ಪುನಃಶ್ಚೇತನಕ್ಕಾಗಿ ಸಮರ್ಥರನ್ನು ಪಡೆಯಲು ಸಾಧ್ಯವಿದೆ ಎಂದ ಕುಮಾರ,ಯಾವುದೇ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜೆಟ್ ಅನ್ನು ದಿವಾಳಿ ನ್ಯಾಯಾಲಯಕ್ಕೆ ಒಯ್ಯುವುದು ಅಂತಿಮ ಆಯ್ಕೆಯಾಗುತ್ತದೆ ಎಂದರು.

ಮಾರ್ಚ್‌ನೊಳಗೆ ವೇತನಗಳನ್ನು ಪಾವತಿಸದಿದ್ದರೆ ಎ.1ರಿಂದ ಹಾರಾಟಗಳನ್ನು ನಿಲ್ಲಿಸುವುದಾಗಿ ಜೇಟ್‌ನ ದೇಶಿಯ ಪೈಲಟ್‌ಗಳ ಸಂಘವು ಮಂಗಳವಾರ ಬೆದರಿಕೆಯೊಡ್ಡಿದೆ.

ಜೆಟ್ ಏರ್‌ವೇಸ್‌ನ ಬಿಕ್ಕಟ್ಟಿನ ಕುರಿತು ಚರ್ಚಿಸಲು ತುರ್ತು ಸಭೆ ನಡೆಸಿದ್ದ ನಾಗರಿಕ ವಾಯುಯಾನ ಸಚಿವಾಲಯವು,ಕೊನೆಯ ಕ್ಷಣದ ಯಾನ ಬದಲಾವಣೆಗಳನ್ನು ತಪ್ಪಿಸುವಂತೆ ಮತ್ತು ತನ್ನ ವಿಮಾನಗಳನ್ನು ಹಾರಾಟಕ್ಕೆ ಸನ್ನದ್ಧವಾಗಿರಿಸುವಂತೆ ಹಾಗೂ ಯಾನ ರದ್ದತಿಗಳಿಂದ ತೊಂದರೆಯಲ್ಲಿರುವ ಗ್ರಾಹಕರ ಬಗ್ಗೆ ಕಾಳಜಿ ವಹಿಸುವಂತೆ ಅದಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News