2018ರಲ್ಲಿ ಮೋದಿಯಿಂದ 1 ಕೋಟಿ ಉದ್ಯೋಗ ನಾಶ: ರಾಹುಲ್ ಗಾಂಧಿ

Update: 2019-03-20 17:39 GMT

ಇಂಫಾಲ, ಮಾ. 20: ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹೊರತಾಗಿಯೂ ನರೇಂದ್ರ ಮೋದಿ ಸರಕಾರ 2018ರಲ್ಲಿ 1 ಕೋಟಿ ಉದ್ಯೋಗಗಳನ್ನು ನಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ಇಂಫಾಲದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಆಡಳಿತದ 2018ರಲ್ಲಿ ಪ್ರತಿ ದಿನ 30 ಸಾವಿರ ಉದ್ಯೋಗಗಳು ನಾಶವಾಗಿವೆ ಎಂದರು. 2018ರಲ್ಲಿ ಪ್ರಧಾನಿ ಮೋದಿ ಅವರು 1 ಕೋಟಿ ಉದ್ಯೋಗವನ್ನು ನಾಶ ಮಾಡಿದ್ದಾರೆ. ಇದು ಅವರ ಅಸಮರ್ಥತೆಯ ದ್ಯೋತಕ. 2 ಕೋಟಿ ಉದ್ಯೋಗ ನೀಡುವುದಾಗಿ ಪ್ರಧಾನಿ ನೀಡಿದ ಭರವಸೆ ಹಾಗೂ ವಸ್ತುಸ್ಥಿತಿ ವಿರೋಧಾಭಾಸವಾಗಿದೆ ಎಂದು ಅವರು ಹೇಳಿದರು.

2016ರ ನಗದು ನಿಷೇಧದ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅವರು, ಇದು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ‘‘ಒಂದು ದಿನ ಬೆಳಗ್ಗೆ ಮೋದಿ ಅವರು ಎದ್ದು ನಗದು ನಿಷೇಧಿಸಲು ನಿರ್ಧರಿಸಿದರು. ಇದು ಜೋಕೇ?, ಇದು ಜನರ ಬದುಕನ್ನು ನಾಶ ಮಾಡಿದೆ.’’ ಎಂದರು.

 ಪ್ರಧಾನಿ ಅವರು ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭ ನಿಮ್ಮ ಸಂಸ್ಕೃತಿ, ನಿಮ್ಮ ಇತಿಹಾಸಕ್ಕೆ ಅವಮಾನ ಮಾಡಿದ್ದಾರೆ. ಮಣಿಪುರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಲಾಗುವುದು ಎಂದು ಅವರ ಪಕ್ಷದ ಅಧ್ಯಕ್ಷ ಹೇಳುತ್ತಿದ್ದಾರೆ. ಈ ಜನರು ನಿಮ್ಮ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದ್ದಾರೆ. ನಾವು ಈ ಮಸೂದೆ ಮಂಜೂರಾಗಲು ಅವಕಾಶ ನೀಡಲಾರೆವು. ಕಾಂಗ್ರೆಸ್ ನಿಮ್ಮ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News