ನೀರವ್ ಮೋದಿ ಗಡಿಪಾರಿಗೆ ತೀವ್ರಗೊಂಡ ಭಾರತದ ಪ್ರಯತ್ನ: ಬ್ರಿಟನ್‌ಗೆ ಇನ್ನಷ್ಟು ಸಾಕ್ಷಾಧಾರಗಳ ಸಲ್ಲಿಕೆ

Update: 2019-03-21 15:57 GMT

ಹೊಸದಿಲ್ಲಿ,ಮಾ.21: ಮಂಗಳವಾರ ಲಂಡನ್ನಿನಲ್ಲಿ ಬಂಧಿಸಲ್ಪಟ್ಟಿರುವ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರುಗೊಳಿಸಲು ದೇಶದ ತನಿಖಾ ಸಂಸ್ಥೆಗಳ ಪ್ರಯತ್ನಗಳು ತೀವ್ರಗೊಂಡಿವೆ.

ಲಂಡನ್ನಿನ ನ್ಯಾಯಾಲಯವು ನೀರವ್‌ಗೆ ಜಾಮೀನು ನಿರಾಕರಿಸಿದ ಬಳಿಕ ಭಾರತೀಯ ತನಿಖಾ ಸಂಸ್ಥೆಗಳು ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್(ಸಿಪಿಎಸ್)ನೊಂದಿಗೆ ಆತನ ವಿರುದ್ಧ ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಹಂಚಿಕೊಂಡಿವೆ.

ನೀರವ್ ವಿರುದ್ಧದ ಆರೋಪಪಟ್ಟಿ,ಎಫ್‌ಐಆರ್ ಮತ್ತು ಭಾರತೀಯ ನ್ಯಾಯಾಲಯಗಳು ಹೊರಡಿಸಿರುವ ಜಾಮೀನುರಹಿತ ವಾರಂಟ್ ಆದೇಶಗಳನ್ನು ಭಾರತವು ಈಗಾಗಲೇ ಬ್ರಿಟನ್ ಅಧಿಕಾರಿಗಳಿಗೆ ಸಲ್ಲಿಸಿದೆ.

ನೀರವ್ ಮೋದಿಯನ್ನು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದೂ ಅಧಿಕಾರಿಗಳು ಸಿಪಿಎಸ್‌ಗೆ ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ವಂಚನೆ ಪ್ರಕರಣದಲ್ಲಿ ನೀರವ್ ಆರೋಪಿಯಾಗಿದ್ದು,ಸಂಬಂಧಿ ಮೆಹುಲ್ ಚೋಕ್ಸಿ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದಾನೆ.

ನೀರವ್ ಬಂಧನವು ಆತನ ಗಡಿಪಾರು ಪ್ರಕ್ರಿಯೆಗೆ ಚಾಲನೆ ನೀಡಿದೆ. ಭಾರತಕ್ಕೆ ಹಸ್ತಾಂತರಗೊಂಡ ಬಳಿಕ ಆತನ ಸಮಸ್ಯೆಗಳು ಇನ್ನಷ್ಟು ಹೆಚ್ಚಬಹುದು ಮತ್ತು ಹಲವಾರು ಪ್ರಕರಣಗಳಲ್ಲಿ ತನಿಖೆಗೊಳಗಾಗಬಹುದು ಎಂದು ತನಿಖಾ ಸಂಸ್ಥೆಗಳಲ್ಲಿಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News