ಸಿಂಗಾಪುರ: ದಂಗೆಯಲ್ಲಿ ತೊಡಗಿದ್ದ ಭಾರತೀಯನಿಗೆ ಐದು ವರ್ಷ ಜೈಲು, ಛಡಿಯೇಟಿನ ಶಿಕ್ಷೆ

Update: 2019-03-22 17:02 GMT

ಸಿಂಗಾಪುರ, ಮಾ.22: ಇಲ್ಲಿಯ ಗುರುದ್ವಾರವೊಂದರ ಹೊರಗೆ ಗುಂಪು ಘರ್ಷಣೆ ವೇಳೆ ಮರದ ಹಲಗೆಯನ್ನೆಸೆದು ಇಬ್ಬರನ್ನು ಗಾಯಗೊಳಿಸಿದ್ದ ಭಾರತೀಯ ಪ್ರಜೆ ಯದ್ವಿಂದರ್ ಸಿಂಗ್(26) ಎಂಬಾತನಿಗೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಐದು ವರ್ಷಗಳ ಜೈಲು ಮತ್ತು 12 ಛಡಿಯೇಟುಗಳ ಶಿಕ್ಷೆಯನ್ನು ವಿಧಿಸಿದೆ.

2017,ಎಪ್ರಿಲ್‌ನಲ್ಲಿ ಸಿಲಾಟ್ ರೋಡ್ ಗುರುದ್ವಾರಾದ ಹೊರಗೆ ಸಿಕ್ಖರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು,ಒಂದು ಗುಂಪಿನ ನೇತೃತ್ವವನ್ನು ಸಿಂಗ್ ವಹಿಸಿದ್ದ. ಒಟ್ಟು ಸುಮಾರು 60 ರಷ್ಟು ಜನರಿದ್ದ ಈ ಪರಸ್ಪರ ವಿರೋಧಿ ಗುಂಪುಗಳು ಹೊಡೆದಾಟದ ವೇಳೆ ದೊಣ್ಣೆಗಳು,ಮರದ ಹಲಗೆಗಳು ಮತ್ತು ಬೆಲ್ಟ್‌ಗಳನ್ನು ಧಾರಾಳವಾಗಿ ಬಳಸಿದ್ದವು. ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ವ್ಯತ್ಯಯವುಂಟಾಗಿತ್ತು.

ಸಿಂಗ್ ಮರದ ಹಲಗೆಯಿಂದ ಇಬ್ಬರಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ ದೃಶ್ಯ ಸಾರ್ವಜನಿಕ ಬಸ್‌ವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು,ನ್ಯಾಯಾಲಯದಲ್ಲಿ ಅದನ್ನು ಪ್ರದರ್ಶಿಸಲಾಗಿತ್ತು.

ತನ್ನ ಬಂಧನದ ನಂತರ ಸಿಂಗಾಪುರದಿಂದ ಪರಾರಿಯಾಗಲು ಸಿಂಗ್ ಹವಣಿಸಿದ್ದ. ಅದಾಗಲೇ 2016ರಲ್ಲಿ ದಂಗೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲು ಸೇರಿದ್ದ ಆತ ಜಾಮೀನಿನಲ್ಲಿದ್ದಾಗ ಈ ಹೊಸ ಅಪರಾಧವನ್ನೆಸಗಿದ್ದ. ಹಫ್ತಾ ವಸೂಲಿ ಪ್ರಕರಣವೊಂದರಲ್ಲಿಯೂ ಆತ ಜಾಮೀನಿನಲ್ಲಿದ್ದ.

ಮೊದಲ ಹಂತದ ವಿಚಾರಣೆಯ ಬಳಿಕ 2018, ಅಕ್ಟೋಬರ್‌ನಲ್ಲಿ ಸಿಂಗಾಪುರದಿಂದ ಮಲೇಶಿಯಾಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಸಿಂಗ್ ಬಸ್‌ನಲ್ಲಿ ಸರಕುಗಳ ನಡುವೆ ತನ್ನನ್ನು ಬಚ್ಚಿಟ್ಟು ಸಾಗಿಸಲು ವ್ಯಕ್ತಿಯೋರ್ವನಿಗೆ 4,000 ಸಿಂಗಾಪುರ ಡಾಲರ್‌ಗಳನ್ನು ಪಾವತಿಸಿದ್ದ. ಆದರೆ ಮಲೇಶಿಯಾದ ಗಡಿಯನ್ನು ಪ್ರವೇಶಿಸುವ ಮೊದಲೇ ತನಿಖಾ ಠಾಣೆಯಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಬಂಧಿತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News