'ಮೋದಿ' ಚಿತ್ರಕ್ಕೆ ನಾನು ಹಾಡು ಬರೆದೇ ಇಲ್ಲ: ಜಾವೇದ್ ಅಖ್ತರ್

Update: 2019-03-22 17:21 GMT

ಮುಂಬೈ, ಮಾ.22: ಗುರುವಾರ ಬಿಡುಗಡೆಯಾದ ‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೇಲರ್ ಕೊನೆಯಲ್ಲಿ ತನ್ನ ಹೆಸರು ಹಾಕಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಖ್ಯಾತ ಗೀತ ರಚನೆಕಾರ ಜಾವೇದ್  ಅಖ್ತರ್  ತಾನು ಆ ಚಿತ್ರಕ್ಕೆ ಯಾವುದೇ ಹಾಡು ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರೇಲರ್ ಕೊನೆಯಲ್ಲಿ ಜಾವೇದ್ ಅಖ್ತರ್ ಹೆಸರು ನೋಡಿ ಹಲವರ ಹುಬ್ಬೇರಿತ್ತು. ಬಿಜೆಪಿ ಹಾಗು ಪ್ರಧಾನಿ ಮೋದಿ ಅವರ ನೀತಿಗಳ ಕಟು ಟೀಕಾಕಾರರಾದ ಅಖ್ತರ್ ಅವರು ಈ ಚಿತ್ರಕ್ಕೆ ಹೇಗೆ ಹಾಡು ಬರೆದರು ಎಂದು ಆಶ್ಚರ್ಯ ವ್ಯಕ್ತವಾಗಿತ್ತು.

ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಅಖ್ತರ್ ಅವರು, "ನನ್ನ ಹೆಸರು ನೋಡಿ ನನಗೆ ಆಶ್ಚರ್ಯವಾಗಿದೆ. ನಾನು ಈ ಚಿತ್ರಕ್ಕೆ ಯಾವುದೇ ಹಾಡು ಬರೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News