ರಫೆಲ್ ನಡಾಲ್ ವಾಪಸ್?

Update: 2019-03-22 18:43 GMT

ಪ್ಯಾರಿಸ್, ಮಾ.22: ಮಂಡಿ ನೋವಿನಿಂದ ಬಳಲುತ್ತಿರುವ ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್ ಮಾಂಟಿ ಕಾರ್ಲೊ ಮಾಸ್ಟರ್ಸ್ ಟೂರ್ನಮೆಂಟ್‌ನಲ್ಲಿ ಮತ್ತೆ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆಯಿದೆ. ಗುರುವಾರ ಆಟಗಾರರ ಅಧಿಕೃತ ಪಟ್ಟಿಯಲ್ಲಿ ನಡಾಲ್‌ರನ್ನು ಸೇರಿಸಲಾಗಿದೆ.

ಇಲ್ಲಿ ನಡೆಯುವ ಕ್ಲೇ-ಕೋರ್ಟ್ ಟೂರ್ನಮೆಂಟ್‌ಗೆ ಟೂರ್ನಮೆಂಟ್‌ನ ಆಯೋಜಕರು ತಂಡವನ್ನು ಪ್ರಕಟಿಸಿದ್ದಾರೆ. ನಡಾಲ್ ದಾಖಲೆ 11 ಬಾರಿ ಗೆಲುವು ದಾಖಲಿಸಿದ್ದು 2005ರಿಂದ 15ರ ತನಕ ಮಾಂಟಿ ಕಾರ್ಲೊದಲ್ಲಿ 46 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇದು ಟೂರ್ನಮೆಂಟ್‌ವೊಂದರಲ್ಲಿ ಪುರುಷ ಅಥವಾ ಮಹಿಳಾ ಟೆನಿಸ್ ತಾರೆಯ ಸತತ ಗೆಲುವಿನ ದಾಖಲೆಯಾಗಿದೆ.

ಕಳೆದ ವಾರ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಕರೆನ್ ಖಚನೊವ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡುವಾಗ ಬಲ ಮಂಡಿನೋವು ಕಾಣಿಸಿಕೊಂಡ ಕಾರಣ ದ್ವಿತೀಯ ರ್ಯಾಂಕಿನ ನಡಾಲ್ ಸೆಮಿ ಫೈನಲ್‌ನಲ್ಲಿ ದೀರ್ಘಕಾಲದ ಎದುರಾಳಿ ರೋಜರ್ ಫೆಡರರ್ ವಿರುದ್ಧ ಆಡುವುದರಿಂದ ಹಿಂದೆ ಸರಿದಿದ್ದರು.

ನಡಾಲ್ ಹಾರ್ಡ್-ಕೋರ್ಟ್ ಮಿಯಾಮಿ ಓಪನ್‌ನಿಂದಲೂ ಹೊರ ನಡೆದಿದ್ದರು. ಈ ಟೂರ್ನಿಯು ಈ ವಾರ ಆರಂಭವಾಲಿದೆ. 32ರ ಹರೆಯದ ನಡಾಲ್ ಮೇ 26ರಿಂದ ಜೂ.9ರ ತನಕ ನಡೆಯುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆ 12ನೇ ಬಾರಿ ಪ್ರಶಸ್ತಿ ಜಯಿಸಿ ಹೊಸ ದಾಖಲೆ ನಿರ್ಮಿಸುವ ಗುರಿ ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News