ಸಚಿನ್‌ ಅಡುಗೆ ಮನೆ ಇನ್ನಿಂಗ್ಸ್; ರುಚಿಯ ಬೌಂಡರಿ ದಾಟಿದ ‘ಬೇಂಗನ್ ಕಾ ಬರ್ತ’

Update: 2019-03-23 05:52 GMT

ಕ್ರಿಕೆಟ್‌ನಿಂದ ವಿರಮಿಸಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ಬಿಡುವಿನ ವೇಳೆ ಏನು ಮಾಡುತ್ತಿರಬಹುದು. ಅಂತಹದ್ದೊಂದು ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಅವರು ದಿನವಿಡೀ ತನ್ನ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ ಎಂದರೂ ತಪ್ಪಿಲ್ಲ. ಕಾರಣ ಕಳೆದ ಮಹಿಳಾ ದಿನದಂದು ಸಚಿನ್ ತನ್ನ ಅಡುಗೆಮನೆಯಲ್ಲಿ ಒಂದು ಶ್ರೇಷ್ಠ ‘ಅಡುಗೆ’ಯ ಇನ್ನಿಂಗ್ಸ್ ಯಶಸ್ವಿಯಾಗಿ ನಿರ್ವಹಿಸಿದರು.

ತನ್ನ ತಾಯಿ, ಪತ್ನಿ ಅಂಜಲಿ ಹಾಗೂ ಮಗಳು ಸಾರಾಳಿಗಾಗಿ ಸಚಿನ್ ರುಚಿಕರವಾದ ಅಡುಗೆಯೊಂದನ್ನು ಮಾಡಿದರು. ಬದನೆಕಾಯಿ, ಈರುಳ್ಳಿ, ಟೊಮೆಟೊ ಜೊತೆಗೆ ಮಸಾಲೆ ಸೇರಿಸಿ ‘ಬೇಂಗನ್ ಕಾ ಬರ್ತ’ ಎಂಬ ಪಂಜಾಬಿ ರೆಸಿಪಿಯನ್ನು ಸಚಿನ್ ತನ್ನ ಮನೆಯವರಿಗಾಗಿ ತಯಾರಿಸಿದರು.

‘ಇದನ್ನು ಮೊದಲು ನನ್ನ ತಾಯಿಗೆ ಸವಿಯಲು ಕೊಡುತ್ತೇನೆ. ಕಾರಣ ನನ್ನ ಬಾಲ್ಯ ಕಾಲದಲ್ಲಿ ಇದನ್ನು ನನಗಾಗಿ ತಯಾರಿಸಲು ಅವರು ಎಷ್ಟೋ ಸಮಯನ್ನು ಮೀಸಲಿಡುತ್ತಿದ್ದರು’ ಎಂದು ಸಚಿನ್ ಹೇಳಿದ್ದಾರೆ.

ಅದೇನಿದ್ದರೂ ಹೆಚ್ಚು ಖಾರವಿಲ್ಲದೆ ಸಿದ್ಧಪಡಿಸಿದ ಬರ್ತ ತಾಯಿಗೆ ಹೆಚ್ಚು ಇಷ್ಟವಾಯಿತು ಎಂದು ಸಚಿನ್ ಫೇಸ್‌ಬುಕ್‌ನಲ್ಲಿ ವೀಡಿಯೊ ಸಹಿತ ಬರೆದಿದ್ದಾರೆ.

https://www.facebook.com/SachinTendulkar/videos/668097860313525/

ಸಚಿನ್ ತೆಂಡುಲ್ಕರ್ ಅವರ ಮನಗೆದ್ದ ಬೇಂಗನ್ ಕಾ ಬರ್ತ ನಾವೂ ಟ್ರೈ ಮಾಡೋಣವೇ?

ಬೇಕಾಗುವ ಸಾಮಗ್ರಿಗಳು

ಬದನೆಕಾಯಿ - 2 ದೊಡ್ಡದು, ಈರುಳ್ಳಿ - 2, ಟೊಮೆಟೊ - 3, ಮೊಸರು - 250 ಗ್ರಾಂ, ಮೆಣಸಿನ ಹುಡಿ - 2 ಟೀ ಸ್ಪೂನ್‌, ಅರಸಿನ ಹುಡಿ - 1 ಟೀ ಸ್ಪೂನ್‌, ಕೊತ್ತಂಬರಿ ಹುಡಿ - 1 ಟೀ ಸ್ಪೂನ್‌, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಅರ್ಧ ಕಪ್‌, ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2 ಟೀ ಸ್ಪೂನ್‌, ಗರಂ ಮಸಾಲೆ - 1 ಟೀ ಸ್ಪೂನ್‌, ಅಲಂಕರಿಸಲು - ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ

ಬದನೆಕಾಯಿಯನ್ನು ಗ್ಯಾಸ್ ಸ್ಟೌನಲ್ಲಿ ಸುಡಬೇಕು. ಹೊರಭಾಗದ ಬಣ್ಣ ಬದಲಾವಣೆಯಾಗಲು ಆರಂಭಿಸುವಾಗ ಅದರ ಸಿಪ್ಪೆ ತೆಗೆದು ಚೆನ್ನಾಗಿ ಒಡೆಯಬೇಕು. ಒಂದು ಪಾನ್‌ನಲ್ಲಿ ತೆಂಗಿನೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಬೇಕು. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಸೇರಿಸಿ ಚೆನ್ನಾಗಿ ಬಾಡಿಸಬೇಕು. ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಅರಸಿನಹುಡಿ, ಗರಂಮಸಾಲೆ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅನಂತರ ಇದಕ್ಕೆ ಮೊಸರು ಸೇರಿಸಬೇಕು. ಬಳಿಕ ಒಡೆದ ಬದನೆಕಾಯಿ ಸೇರಿಸಿ ಸಣ್ಣ ಬೆಂಕಿಯಲ್ಲಿ 5 ನಿಮಿಷ ಬೇಯಿಸಬೇಕು. ಕೊನೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ಗರಂ ಮಸಾಲೆ ಚಿಮುಕಿಸಿ ಬಡಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News