×
Ad

ಅಡ್ವಾಣಿಗೆ ಟಿಕೆಟ್ ನಿರಾಕರಣೆ: ಉಮಾ ಭಾರತಿ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-03-24 20:28 IST

ಹೊಸದಿಲ್ಲಿ,ಮಾ.24: ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ಸದ್ಯ ಎಲ್ಲರ ಮನಸ್ಸಿನಲ್ಲಿರುವ ಗೊಂದಲಕ್ಕೆ ಖುದ್ದು ಅಡ್ವಾಣಿಯವರೇ ತೆರೆ ಎಳೆಯಬೇಕು ಎಂದು ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಉಮಾ ಭಾರತಿ ಅಭಿಪ್ರಾಯಿಸಿದ್ದಾರೆ.

ಎಲ್.ಕೆ. ಅಡ್ವಾಣಿಯವರ ವರ್ಚಸ್ಸು ಅವರು ಚುನಾವಣೆಗೆ ಸ್ಪರ್ಧಿಸುವ ಮತ್ತು ಸ್ಪರ್ಧಿಸದಿರುವ ನಿರ್ಧಾರದ ಮೇಲೆ ಅವಲಂಬಿತವಾಗಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.

91ರ ಹರೆಯದ ಹಿರಿಯ ನೇತಾರನ ಬಗ್ಗೆ ಪ್ರಶಂಸೆಯ ಸುರಿಮಳೆಗರೆದ ಉಮಾ ಭಾರತಿ, ಇಂದು ನರೇಂದ್ರ ಮೋದಿ ಪ್ರಧಾನಿಯಾಗುವಷ್ಟು ಮಟ್ಟಕ್ಕೆ ಬಿಜೆಪಿಯನ್ನು ಬೆಳೆಸುವಲ್ಲಿ ಅಡ್ವಾಣಿಯವರು ಬಹಳ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ.

ಅಡ್ವಾಣಿಯವರು 1998ರಿಂದಲೂ ಪ್ರತಿನಿಧಿಸುತ್ತಾ ಬಂದಿರುವ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಿ ಪಕ್ಷಾಧ್ಯಕ್ಷ ಅಮಿತ್ ಶಾರನ್ನು ಕಣಕ್ಕಿಳಿಸಿರುವ ಬಗ್ಗೆ ಉಮಾ ಭಾರತಿಯವರಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಈ ವಿಷಯದ ಬಗ್ಗೆ ರುವ ಗೊಂದಲವನ್ನು ಪರಿಹರಿಸಬೇಕಾಗಿರುವವರು ಖುದ್ದು ಅಡ್ವಾಣಿಯವರೇ ಹೊರತು ನಾವ್ಯಾರು ಆ ಬಗ್ಗೆ ಮಾತನಾಡುವುದು ಸೂಕ್ತ ಎನಿಸುವುದಿಲ್ಲ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಯುವ ನಾಯಕರಿಗೆ ಸ್ಥಾನ ನೀಡಿ ಬೆಳೆಸುವ ಪ್ರಧಾನಿ ಮೋದಿ-ಶಾ ಚಿಂತನೆಯ ಭಾಗವಾಗಿ 80ರ ಹರೆಯ ದಾಟಿದ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News