2025ರ ವೇಳೆಗೆ ದೇಶವನ್ನು ಟಿಬಿ ಮುಕ್ತಗೊಳಿಸಲು ಕ್ರಮ: ಪ್ರಧಾನಿ ಮೋದಿ
ಹೊಸದಿಲ್ಲಿ,ಮಾ.24: 2025ರ ವೇಳೆಗೆ, ಜಾಗತಿಕ ಗುರಿಗೂ ಮೊದಲು, ದೇಶವನ್ನು ಕ್ಷಯರೋಗ ಮುಕ್ತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರ್ವಪ್ರಯತ್ನದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಿಳಿಸಿದ್ದಾರೆ.
ವಿಶ್ವ ಕ್ಷಯರೋಗ ದಿನದ ಅಂಗವಾಗಿ ಟ್ವೀಟ್ ಮಾಡಿದ ಪ್ರಧಾನಿ, ಸಮಾಜವನ್ನು ಟಿಬಿಮುಕ್ತಗೊಳಿಸುವ ಬದ್ಧತೆಯನ್ನು ಸರಕಾರ ಮತ್ತೆ ದೃಢಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಬಡವರಿಗೆ ಬಹಳಷ್ಟು ಸಹಾಯವಾಗಲಿದೆ. ಸರಿಯಾದ ಮತ್ತು ಸಂಪೂರ್ಣ ಚಿಕಿತ್ಸೆಯೇ ಕ್ಷಯ ರೋಗದ ವಿರುದ್ಧದ ಹೋರಾಟವನ್ನು ಗೆಲ್ಲಲು ಪ್ರಮುಖ ಅಸ್ತ್ರವಾಗಿದೆ. ಕ್ಷಯರೋಗಮುಕ್ತ ಅಭಿಯಾನವನ್ನು ಗಟ್ಟಿಗೊಳಿಸುತ್ತಿರುವ ಜನರು ಮತ್ತು ಸಂಸ್ಥೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರದ ಕ್ಷಯರೋಗಮುಕ್ತ ಅಭಿಯಾನ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳು ಆರೋಗ್ಯಸೇವೆಗಳ ಗುಣಮಟ್ಟ ಹೆಚ್ಚಾಗಿದೆ ಮತ್ತು ಕ್ಷಯರೋಗಿಗಳಿಗೆ ನೆರವು ನೀಡುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.