ತನ್ನ ಟ್ವಿಟರ್ ಜನಪ್ರಿಯತೆ ಹೆಚ್ಚಿಸಲು ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮೋದಿ: ಅಧ್ಯಯನ ವರದಿ

Update: 2019-03-24 15:43 GMT

ಹೊಸದಿಲ್ಲಿ, ಮಾ. 24: ಭಾರತದಲ್ಲಿ 2014ರಲ್ಲಿ ನಡೆದ ಮಹಾ ಚುನಾವಣೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ತನ್ನ ಜನಪ್ರಿಯತೆಯನ್ನು ವೃದ್ಧಿಸಿಕೊಳ್ಳುವ ಹಾಗೂ ಚುನಾವಣೆಯ ಮಹಾತ್ವಾಕಾಂಕ್ಷೆ ಈಡೇರಿಸಿಕೊಳ್ಳುವ ದೃಷ್ಟಿಯಿಂದ ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್‌ರಂತಹ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಬೆಳೆಸಿದ್ದರು ಎಂದು ಅಮೆರಿಕದ ಅಧ್ಯಯನ ವರದಿಯೊಂದು ತಿಳಿಸಿದೆ.

ಮಿಚಿಗನ್ ವಿವಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಜೊಯೊಜೀತ್ ಪಾಲ್ , 2009ರ ಫೆಬ್ರವರಿಯಿಂದ 2015ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯ 9 ಸಾವಿರಕ್ಕೂ ಅಧಿಕ ಟ್ವೀಟ್‌ಗಳನ್ನು ಪರಿಶೀಲಿಸಿ ಚುನಾವಣೆಗೆ ಮುನ್ನ ಹಾಗೂ ಚುನಾವಣೆಯ ಬಳಿಕ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಮೋದಿಯ ಸಂಬಂಧದ ಕುರಿತು ಅಧ್ಯಯನ ನಡೆಸಿದ್ದಾರೆ.

2009ರಲ್ಲಿ ಮೋದಿ ಟ್ವಿಟರ್ ಖಾತೆ ಆರಂಭಿಸಿದ್ದಾರೆ. 2012ರ ಅಕ್ಟೋಬರ್ ವೇಳೆಗೆ ಒಂದು ಮಿಲಿಯನ್‌ಗೂ ಹೆಚ್ಚಿನ ಫಾಲೋವರ್‌ಗಳಿದ್ದರೆ ಈಗ ಅವರು 46 ಮಿಲಿಯನ್‌ಗೂ ಅಧಿಕ ಟ್ವಿಟರ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

2000ನೇ ಇಸವಿಯ ಆರಂಭ ಹಾಗೂ ಮಧ್ಯದ ಅವಧಿಯಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಸಂಬಂಧಿಸಿದ ಹಲವು ಘಟನೆಗಳು ಮೋದಿಯ ಪ್ರಭಾವ ವೃದ್ಧಿಸಿಕೊಳ್ಳಲು ತಡೆಯಾಗಿದ್ದವು. ಅಲ್ಲದೆ ಮುಖ್ಯವಾಹಿನಿಯ ಹಲವು ಸಿನೆಮಗಳಲ್ಲಿ 2002ರ ಗುಜರಾತ್ ಗಲಭೆಯ ಬಗ್ಗೆ ನೇರವಾಗಿ ಪ್ರಸ್ತಾವ ಮಾಡಲಾಗಿತ್ತು ಮತ್ತು ರಾಜಕಾರಣಿಗಳು ಹಾಗೂ ಆಡಳಿತ ವರ್ಗ ಈ ಗಲಭೆಗೆ ಕಾರಣಕರ್ತರಾದ ಅಪರಾಧಿಗಳೆಂದು ಬಿಂಬಿಸಲಾಗಿತ್ತು.

ಮೋದಿ ಪ್ರಮುಖ ರಾಜಕೀಯ ಮುಖಂಡರಾಗಿ ಪ್ರವರ್ಧಮಾನಕ್ಕೆ ಬರುವ ಸಂದರ್ಭದಲ್ಲೇ ಕಾಕತಾಳೀಯವಾಗಿ ಭಾರತದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಯೂ ವಿಸ್ತಾರಗೊಂಡಿತ್ತು. ಇದರಿಂದಾಗಿ ಚುನಾವಣಾ ಸಂದರ್ಭ ಹಾಗೂ ಆ ಬಳಿಕ ಸರಕಾರದ ನಾಯಕನಾಗಿ ವಿಶಾಲ ಶ್ರೇಣಿಯ ಸೆಲೆಬ್ರಿಟೀಸ್‌ಗಳ ಜೊತೆ ಮೋದಿಯ ಅನುಬಂಧ ಬೆಳೆಯಿತು ಹಾಗೂ ಆನ್‌ಲೈನ್ ಮೂಲಕ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು ಎಂದು ಪಾಲ್ ವಿವರಿಸಿದ್ದಾರೆ.

   ಆರು ವರ್ಷಗಳಲ್ಲಿ ಮೋದಿಯ ಟ್ವೀಟ್‌ಗಳನ್ನು ಅಧ್ಯಯನ ನಡೆಸಿದ್ದು ಈ ಅವಧಿಯಲ್ಲಿ ಮೂರು ವಿಶಿಷ್ಟ ಹಂತದ ಅನುಬಂಧಗಳನ್ನು ಗಮನಿಸಬಹುದು. ಪ್ರಥಮ ಹಂತದಲ್ಲಿ , ರಾಷ್ಟ್ರೀಯ ಆಕರ್ಷಣೆಯಿಲ್ಲದ ಓರ್ವ ಪ್ರಾದೇಶಿಕ ಮುಖಂಡನೆಂಬ ಇಮೇಜಿನಿಂದ ಹೊರ ಬರುವುದು ಮೋದಿಗೆ ಮುಖ್ಯವಾಗಿತ್ತು.

  ಎರಡನೇ ಹಂತದಲ್ಲಿ ಅವರು ನಟ ಅಮಿತಾಬ್ ಬಚ್ಚನ್, ಉದ್ಯಮಿ ನಾರಾಯಣ ಮೂರ್ತಿ, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ರವಿಶಂಕರ್‌ರಂತಹ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಸಾಧಿಸಿದರು. ಇವರೊಂದಿಗೆ ಸಂಪರ್ಕ ಸಾಧಿಸಿದ ಬಳಿಕ , ತನ್ನ ಬೆಂಬಲಿಗರ ಗುಂಪಿನಿಂದ ಹೊರಗಿರುವವರೂ(ಹೆಚ್ಚಿನ ಹಿಂಬಾಲಕರನ್ನು ಹೊಂದಿರುವವರು) ತನ್ನೊಂದಿಗೆ ಅನುಬಂಧ ಹೊಂದಿರಲು ಬಯಸುತ್ತಿದ್ದಾರೆ ಎಂಬ ಭಾವನೆಯನ್ನು ಪ್ರಸ್ತುತಪಡಿಸಿದರು ಎಂದು ವರದಿ ತಿಳಿಸಿದೆ.

 2013ರ ವೇಳೆಗೆ ತನ್ನ ಅಭಿಯಾನಕ್ಕೆ ಸೆಲೆಬ್ರಿಟಿ‌ಗಳ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ ಮೋದಿ ವಿವಿಧ ಸೆಲೆಬ್ರಿಟೀಸ್‌ಗಳ ಹೆಸರನ್ನು ಟ್ವೀಟ್‌ನಲ್ಲಿ ಪ್ರಸ್ತಾವಿಸಿದರು. ಅವರೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಪ್ರಸಾರ ಮಾಡಿದರು. ಕೆಲವು ಸಂದರ್ಭದಲ್ಲಿ ತನ್ನ ಅಭಿಯಾನಕ್ಕೆ ಅವರ ಸಂಪೂರ್ಣ ಅನುಮೋದನೆ ಗಳಿಸಿಕೊಂಡರು. ಚುನಾವಣೆಯ ಬಳಿಕದ ಮೂರನೇ ಹಂತದಲ್ಲಿ ಮೋದಿ ಸೆಲೆಬ್ರಿಟಿಗಳನ್ನು ತನ್ನ ಅಭಿಯಾನದ ಚಾಂಪಿಯನ್‌ಗಳು ಎಂದು ಕರೆದಿದ್ದರು ಎಂದು ಪಾಲ್ ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News