ನಕಲಿ ಆಡಿಟ್, ಕೋಟ್ಯಾಂತರ ರೂ. ಅವ್ಯವಹಾರ: ಬಿಜೆಪಿ ನಾಯಕ ರಮಣ್ ಸಿಂಗ್ ಅಳಿಯನ ವಿರುದ್ಧ ತನಿಖಾ ತಂಡದ ವರದಿ

Update: 2019-03-25 11:26 GMT

ರಾಯಪುರ್, ಮಾ.25: ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಅಳಿಯ ಡಾ.ಪುನೀತ್ ಗುಪ್ತಾ ಅವರು ಆರೋಪಿಯಾಗಿರುವ ರಾಯಪುರ್ ನಗರದ ದಾವು ಕಲ್ಯಾಣ್ ಸಿಂಗ್ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವ್ಯವಹಾರ ಪ್ರಕರಣದ ತನಿಖೆ ನಡೆಸಿರುವ ಹಿರಿಯ ಸರಕಾರಿ ಅಧಿಕಾರಿಗಳ ತ್ರಿಸದಸ್ಯ ತನಿಖಾ ತಂಡವು ತನ್ನ ವರದಿಯಲ್ಲಿ ಆಸ್ಪತ್ರೆಯಲ್ಲಿ ನಡೆದಿರುವ ಹಲವಾರು ಅವ್ಯವಹಾರಗಳ ಪಟ್ಟಿ ಮಾಡಿದೆ. ಅಧಿಕೃತ ಅನುಮೋದನೆಯಿಲ್ಲದೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಹಾಗೂ ಸುಳ್ಳು ಆಡಿಟ್ ವರದಿಗಳನ್ನು ಸಲ್ಲಿಸಲಾಗಿದೆ ಎಂದು ಕಂಡುಕೊಂಡಿದೆ.

ಈ 18 ಪುಟಗಳ ತನಿಖಾ ವರದಿಯ ಆಧಾರದಲ್ಲಿಯೇ ಛತ್ತೀಸಗಢ ಪೊಲೀಸರು ಕಳೆದ ವಾರ ಡಾ. ಪುನೀತ್ ಗುಪ್ತಾ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಗುಪ್ತಾ ಜನವರಿ 2016 ಹಾಗೂ ಜನವರಿ 2019ರ ನಡುವೆ ಆಸ್ಪತ್ರೆಯ ಸುಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಕಾಂಗ್ರೆಸ್ ಸರಕಾರ ನಂತರ ಬೇರೆಡೆ ವರ್ಗಾಯಿಸಿದ್ದರೂ ಅವರು ಸರಕಾರಿ ಸೇವೆಗೆ ರಾಜೀನಾಮೆ ನೀಡಿದ್ದರು.

ಸುಮಾರು ರೂ 50 ಕೋಟಿ ಅವ್ಯವಹಾರ ನಡೆಸಿದ ಆರೋಪ ಹೊರಿಸಿ ಅವರ ವಿರುದ್ಧ ಕ್ರಿಮಿನಲ್ ಸಂಚು, ಫೋರ್ಜರಿ ಮತ್ತು ವಂಚನೆ ಆರೋಪವನ್ನು ಹೊರಿಸಿ ಪೊಲೀಸರು ಮಾರ್ಚ್ 16ರಂದು ಪ್ರಕರಣ ದಾಖಲಿಸಿದ್ದರು.

ಆಸ್ಪತ್ರೆಯ ಹೊಸ ಸುಪರಿಂಟೆಂಡೆಂಟ್ ಡಾ.ಕೆ.ಕೆ. ಸಹಾರೆ ಅವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಡಾ. ಸಹಾರೆ ತಮ್ಮ ದೂರಿನಲ್ಲಿ ಛತ್ತೀಸಗಢ ಸರಕಾರ ರಚಿಸಿದ್ದ ಸಮಿತಿಯ ವರದಿಯನ್ನೂ ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News