ಸೇವೆಗಳ ನಿಯಂತ್ರಣ ಯಾರದು ಎನ್ನುವುದನ್ನು ನಿರ್ಧರಿಸಲು ವಿಶಾಲ ಪೀಠ ರಚನೆಗೆ ಸುಪ್ರೀಂ ಕೋರ್ಟ್‌ಗೆ ಆಪ್ ಕೋರಿಕೆ

Update: 2019-03-25 15:33 GMT

ಹೊಸದಿಲ್ಲಿ,ಮಾ.25: ಸೇವೆಗಳ ಮೇಲೆ ನಿಯಂತ್ರಣವನ್ನು ಕೇಂದ್ರ ಅಥವಾ ದಿಲ್ಲಿ ಸರಕಾರ ಹೊಂದಿರಬೇಕೇ ಎನ್ನುವುದನ್ನು ನಿರ್ಧರಿಸಲು ವಿಶಾಲ ಪೀಠವೊಂದನ್ನು ರಚಿಸುವಂತೆ ಕೋರಿ ಆಮ್ ಆದ್ಮಿ ಪಾರ್ಟಿ(ಆಪ್)ಯು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು,ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಈ ವಿಷಯವನ್ನು ಪರಿಶೀಲಿಸಲಿದೆ.

ಸರಕಾರಿ ನೌಕರರ ನೇಮಕ ಮತ್ತು ವರ್ಗಾವಣೆಗೆ ದಿಲ್ಲಿ ಸರಕಾರದ ಅಧಿಕಾರ ಕುರಿತು ಸರ್ವೋಚ್ಚ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರ ಪೀಠವು ಫೆ.14ರಂದು ಭಿನ್ನ ತೀರ್ಪನ್ನು ನೀಡಿತ್ತು. ಕೇಂದ್ರದೊಂದಿಗೆ ಅಧಿಕಾರದ ಹಗ್ಗ ಜಗ್ಗಾಟದ ನಡುವೆಯೇ ದಿಲ್ಲಿಯಲ್ಲಿನ ಅರವಿಂದ ಕೇಜ್ರಿವಾಲ್ ಸರಕಾರವು ಹೊರಡಿಸಿದ್ದ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಪೀಠವು ಈ ತೀರ್ಪನ್ನು ಪ್ರಕಟಿಸಿತ್ತು.

ಇಬ್ಬರು ನ್ಯಾಯಾಧೀಶರ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ ಭೂಷಣ್ ಅವರು,‘ಸೇವೆಗಳ’ ಕುರಿತು ಅಧಿಕಾರ ವ್ಯಾಪ್ತಿಯ ವಿಷಯವನ್ನು ವಿಶಾಲ ಪೀಠದ ಅವಗಾಹನೆಗೆ ಒಪ್ಪಿಸಿದ್ದರು. ಪರಿಶೀಲನೆಯಲ್ಲಿದ್ದ ಇತರ ವಿಷಯಗಳ ಕುರಿತಂತೆ ನ್ಯಾಯಮೂರ್ತಿಗಳು ಭಿನ್ನ ತೀರ್ಪುಗಳನ್ನು ನೀಡಿದ್ದರು.

ದಿಲ್ಲಿ ಆಡಳಿತದಲ್ಲಿನ ಸೇವೆಗಳ ಮೇಲೆ ನಿಯಂತ್ರಣ,ವಿಚಾರಣಾ ಆಯೋಗಗಳ ನೇಮಕದ ಅಧಿಕಾರ,ಭ್ರಷ್ಟಾಚಾರ ನಿಗ್ರಹ ಘಟಕ,ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಗಳ ಮೇಲೆ ಯಾರು ನಿಯಂತ್ರಣವನ್ನು ಹೊಂದಿದ್ದಾರೆ ಎನ್ನವುದನ್ನು ನಿರ್ಧರಿಸುವಂತೆ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.

ಭೂಮಿ,ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ವಿಷಯಗಳ ಅಧಿಕಾರ ವ್ಯಾಪ್ತಿಯನ್ನು ಲೆಫ್ಟಿನಂಟ್ ಗವರ್ನರ್‌ಗೆ ಸೀಮಿತಗೊಳಿಸಿದ್ದ ನ್ಯಾಯಾಲಯವು,ಇತರ ವಿಷಯಗಳಲ್ಲಿ ಅವರು ಚುನಾಯಿತ ಸರಕಾರದ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯಾಚರಿಸಬೇಕು ಎಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News