ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಚೆನ್ನೈ

Update: 2019-03-26 18:46 GMT

ದಿಲ್ಲಿ, ಮಾ.26: ಇಲ್ಲಿನ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗಳ ಜಯ ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್‌ಗಳನ್ನು ಜಮೆ ಮಾಡಿತ್ತು.

ಡೆಲ್ಲ್ಲಿ ತಂಡದ ಪರ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಮೊದಲ ವಿಕೆಟ್ ಜೊತೆಯಾಟದಲ್ಲಿ 4.3 ಓವರ್‌ಗಳಲ್ಲಿ 36 ರನ್ ಸೇರಿಸಿದರು. ಈ ವೇಳೆ 16 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 24 ರನ್ ಗಳಿಸಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಪೃಥ್ವಿ ಶಾ ಅವರು ದೀಪಕ್ ಚಾಹರ್ ಎಸೆತದಲ್ಲಿ ವಾಟ್ಸನ್‌ಗೆ ಕ್ಯಾಚಿತ್ತು ಹೊರನಡೆದರು. ಈ ಹಂತದಲ್ಲಿ ಧವನ್ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ 20 ಎಸೆತಗಳಲ್ಲಿ 18 ರನ್ ಗಳಿಸಿದರು. ಅಯ್ಯರ್ ಇಮ್ರಾನ್ ತಾಹಿರ್‌ರ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಅಯ್ಯರ್ ನಂತರ ಬಂದ ಸ್ಫೋಟಕ ದಾಂಡಿಗ ವಿಕೆಟ್ ಕೀಪರ್ ರಿಷಭ್ ಪಂತ್ (25, 13 ಎಸೆತ 2 ಬೌಂಡರಿ, 1 ಸಿಕ್ಸರ್) ಆರಂಭದಲ್ಲೇ ಅಬ್ಬರಿಸಿದರೂ ಬ್ರಾವೊಗೆ ವಿಕೆಟ್ ಒಪ್ಪಿಸಿದರು. ಕಾಲಿನ್ ಇನ್‌ಗ್ರಾಂ(2) ಬ್ರಾವೊಗೆ 2ನೇ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ಇನ್‌ಗ್ರಾಂ ವಿಕೆಟ್ ಪತನದ ನಂತರ ಕ್ರೀಸ್‌ಗೆ ಆಗಮಿಸಿದ ಕೀಮೊ ಪಾಲ್ (0) ರವೀಂದ್ರ ಜಡೇಜ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಉತ್ತಮವಾಗಿ ಆಡುತ್ತಿದ್ದ ಧವನ್ ಕೂಡ ಅರ್ಧಶತಕ (51, 47 ಎಸೆತ, 7 ಬೌಂಡರಿ) ಗಳಿಸಿ ಡ್ವೇನ್ ಬ್ರಾವೊಗೆ ವಿಕೆಟ್ ಒಪ್ಪಿಸಿದರು. 148 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈಗೆ ಶೇನ್ ವಾಟ್ಸನ್ (44, 26 ಎಸೆತ, 4 ಬೌಂಡರಿ, 3 ಸಿಕ್ಸರ್) ಉತ್ತಮ ಆರಂಭಿಕರಾಗಿ ಮೂಡಿಬಂದರು. ಅಂಬಟಿ ರಾಯುಡು (5) ವೈಫಲ್ಯ ಅನುಭವಿಸಿದರು. ಈ ವೇಳೆ ವಾಟ್ಸನ್‌ಗೆ ಜತೆಗೂಡಿದ ರೈನಾ(30, 16 ಎಸೆತ, 4 ಬೌಂಡರಿ, 1 ಸಿಕ್ಸರ್) 2ನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು. ವಾಟ್ಸನ್, ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ರೈನಾ ಕೂಡ ಮಿಶ್ರಾಗೆ ವಿಕೆಟ್ ಕೈಚೆಲ್ಲಿದರು. ಕೇದಾರ್ ಜಾಧವ್(27) ರನ್ ಗಳಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಎಂ.ಎಸ್. ಧೋನಿ(32) ಹಾಗೂ ಬ್ರಾವೊ (4) ಗೆಲುವಿನ ವಿಧಾನ ಪೂರೈಸಿದರು. ಅಮಿತ್ ಮಿಶ್ರಾ ಡೆಲ್ಲಿ ಪರ 2 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು.

ಚೆನ್ನೈ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್

ಸಿಎಸ್‌ಕೆ ಬೌಲರ್‌ಗಳು ಮೊದಲ 10 ಓವರ್‌ಗಳಲ್ಲಿ ಡೆಲ್ಲಿ ದಾಂಡಿಗರನ್ನು ಅಬ್ಬರಿಸದಂತೆ ಮಾಡಿದ್ದರು. ದೀಪಕ್ ಚಾಹರ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಗಳಿಸಿದರು. ಹರ್ಭಜನ್ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿದರು. ಬ್ರಾವೊ 4 ಓವರ್‌ಗಳಲ್ಲಿ 33 ರನ್ ನೀಡಿದರೂ 3 ವಿಕೆಟ್ ಪಡೆದು ಮಿಂಚಿದರು. ಜಡೇಜ (23ಕ್ಕೆ 1)ಇಮ್ರಾನ್ ತಾಹಿರ್ (20ಕ್ಕೆ 1) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News