ಟಿಕೆಟ್ ಸಿಗದ ಕೋಪ: ಪಕ್ಷದ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಹೊತ್ತೊಯ್ದ ಶಾಸಕ!

Update: 2019-03-27 06:32 GMT

ಔರಾಂಗಾಬಾದ್, ಮಾ.27: ಮಹಾರಾಷ್ಟ್ರದ ಸಿಲ್ಲೊದ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಬ್ದುಲ್ ಸತ್ತಾರ್ ಎಂಬರು ಲೋಕಸಭಾ ಚುನಾವಣೆಗೆ ಪಕ್ಷದ ಟಿಕೆಟ್ ದೊರೆಯದ ಸಿಟ್ಟಿನಿಂದ ಸ್ಥಳೀಯ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು  ಬೆಂಬಲಿಗರ ಸಹಾಯದಿಂದ  ಕೊಂಡೊಯ್ದ ಘಟನೆ ಮಂಗಳವಾರ ನಡೆದಿದೆ.

ಸತ್ತಾರ್  ಔರಾಂಗಬಾದ್ ಲೋಕಸಭಾ  ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ.  ಸತ್ತಾರ್ ಬದಲಿಗೆ  ಎಂಎಲ್ ಸಿ ಸುಭಾಶ್ ಝಾಮ್ ಬಾದ್ ಎಂಬವರಿಗೆ  ಲೋಕಸಭಾ ಟಿಕೆಟ್ ನೀಡಲಾಗಿತ್ತು. ಇದರಿಂದಾಗಿ ಪಕ್ಷದ ನಾಯಕರ ಮೇಲಿನ ಸಿಟ್ಟಿನಿಂದ  ಕಚೇರಿಯ  ಕುರ್ಚಿಗಳನ್ನು ತೆರವುಗೊಳಿಸಿದ್ದಾರೆ.

ಮಂಗಳವಾರ  ಶಾಗುಂಜ್ ನ ಸ್ಥಳೀಯ  ಕಾಂಗ್ರೆಸ್ ಕಚೇರಿ ಗಾಂಧಿ ಭವನದಲ್ಲಿ ಕಾಂಗ್ರೆಸ್ –ಎನ್ ಸಿಪಿ ಜಂಟಿ ಸಭೆ ನಿಗದಿಯಾಗಿತ್ತು. ಆದರೆ ಶಾಸಕ ಅಬ್ದುಲ್ ಸತ್ತಾರ್ ಕಚೇರಿಯಲ್ಲಿರುವ ಕುರ್ಚಿಗಳನ್ನು ಖಾಲಿ  ಮಾಡಿರುವ ಕಾರಣದಿಂದಾಗಿ  ಅಲ್ಲಿ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ  ಸ್ಥಳೀಯ ಎನ್ ಸಿಪಿ ಕಚೇರಿಯಲ್ಲಿ ಜಂಟಿ ಸಭೆ ನಡೆಯಿತು ಎನ್ನಲಾಗಿದೆ.

" ಕಾಂಗ್ರೆಸ್ ಕಚೇರಿಗೆ  ನಾನು ಕುರ್ಚಿಗಳನ್ನು ಕೊಟ್ಟಿದ್ದೆ. ಆದರೆ ಈಗ ನಾನು ಪಕ್ಷ ಬಿಡುತ್ತಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿದ್ದ ಕುರ್ಚಿಗಳನ್ನು ನಾನು ಹಿಂದಕ್ಕೆ ಕೊಂಡು ಹೋಗಿದ್ದೇನೆ '' ಎಂದು ಶಾಸಕ ಸತ್ತಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News