ಫೇಸ್‌ ಬುಕ್ ನಲ್ಲಿ ಜಾಹೀರಾತು: ಹಣದ ಹೊಳೆ ಹರಿಸಿದ ಬಿಜೆಪಿ ಪೇಜ್ ಗಳು

Update: 2019-03-28 15:58 GMT

ಹೊಸದಿಲ್ಲಿ,ಮಾ.28: ಆಡಳಿತ ಪಕ್ಷ ಬಿಜೆಪಿ ಮತ್ತು ಅದರ ಬೆಂಬಲಿಗರು ಕಳೆದ ಫೆಬ್ರವರಿಯಿಂದ ರಾಜಕೀಯ ಜಾಹೀರಾತುಗಳಿಗೆ ಅತೀಹೆಚ್ಚು ವೆಚ್ಚ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಜಾಲತಾಣದ ವರದಿಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 1 ಮತ್ತು ಮಾರ್ಚ್ 23ರ ಮಧ್ಯೆ ಬಿಡುಗಡೆಯಾದ 41,514 ಜಾಹೀರಾತುಗಳಿಗೆ ಎಲ್ಲ ಭಾರತೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು 8.38 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಪೈಕಿ ಬಿಜೆಪಿ 593 ಜಾಹೀರಾತುಗಳಿಗೆ 7.37 ಲಕ್ಷ ರೂ. ವ್ಯಯಿಸಿದ್ದರೆ ಕಾಂಗ್ರೆಸ್ 491 ಜಾಹೀರಾತುಗಳಿಗೆ 5.91 ಲಕ್ಷ ರೂ ವೆಚ್ಚ ಮಾಡಿದೆ. ಬಿಜೆಪಿ ಪರ ಫೇಸ್‌ಬುಕ್ ಪುಟ ಭಾರತ್ ಕೆ ಮನ್ ಕಿ ಬಾತ್, ಹಕ್ಕು ಸ್ವಾಮ್ಯತೆ ಸಹಿತ 2,498 ಜಾಹೀರಾತುಗಳಿಗೆ 1.15 ಕೋಟಿ ರೂ. ವೆಚ್ಚ ಮಾಡಿದ್ದರೆ ಹಕ್ಕು ಸ್ವಾಮ್ಯತೆರಹಿತ 1,227 ಜಾಹೀರಾತುಗಳಿಗೆ 1.08 ಕೋಟಿ ರೂ. ವೆಚ್ಚ ಮಾಡಿದೆ ಎಂದು ವರದಿ ತಿಳಿಸಿದೆ.

ತನ್ನ ಪುಟಗಳಲ್ಲಿ ಹಾಕಲಾಗುವ ರಾಜಕೀಯ ಜಾಹೀರಾತುಗಳಲ್ಲಿ ಇನ್ನು ಮುಂದೆ ಈ ಜಾಹೀರಾತುಗಳನ್ನು ಹಾಕುವವರ ವಿವರಣೆಗಳನ್ನು ಹೊಂದಿರುವ ಹಕ್ಕು ಸ್ವಾಮ್ಯತೆ ಹಾಕಲಾಗುವುದು ಎಂದು ಫೆಬ್ರವರಿಯಲ್ಲಿ ಫೇಸ್‌ಬುಕ್ ತಿಳಿಸಿತ್ತು.

ರಾಜಕೀಯ ಜಾಹೀರಾತುಗಳಿಗೆ ಅತ್ಯಧಿಕ ವೆಚ್ಚ ಮಾಡಿದ ಮತ್ತೊಂದು ಬಿಜೆಪಿ ಪರ ಫೇಸ್‌ಬುಕ್ ಪುಟ ಮೈ ಫಸ್ಟ್ ವೋಟ್ ಫೋರ್ ಮೋದಿ ‘61 ಲಕ್ಷ ರೂ. ವೆಚ್ಚದಲ್ಲಿ 5,984 ಜಾಹೀರಾತುಗಳನ್ನು ಹಾಕಿದ್ದರೆ ನೇಶನ್ ವಿದ್ ನಮೋ’ ಎಂಬ ಫೇಸ್‌ಬುಕ್ ಪುಟ ಹಕ್ಕು ಸ್ವಾಮ್ಯತೆಯುಳ್ಳ 1,481 ಜಾಹೀರಾತುಗಳಿಗೆ 60 ಲಕ್ಷ ರೂ. ವ್ಯಯ ಮಾಡಿದೆ ಮತ್ತು ಹಕ್ಕು ಸ್ವಾಮ್ಯತೆಯಿರದ ಜಾಹೀರಾತುಗಳಿಗೆ 58 ಲಕ್ಷ ರೂ. ವ್ಯಯ ಮಾಡಿದೆ.

ತಮ್ಮ ಪುಟಗಳಲ್ಲಿ ಪ್ರಸಾರ ಮಾಡಲಾಗುವ ರಾಜಕೀಯ ಜಾಹೀರಾತುಗಳಿಗೆ ಚುನಾವಣಾ ಆಯೋಗದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಪೀಠದ ಪೂರ್ವ ಅನುಮತಿ ಪಡೆದುಕೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಫೇಸ್‌ಬುಕ್, ಟ್ವಿಟರ್, ಗೂಗಲ್ ಮತ್ತು ಯೂಟ್ಯೂಬ್ ಭರವಸೆ ನೀಡಿದೆ ಎಂದು ಕಳೆದ ವಾರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News